
ಬೆಂಗಳೂರು: ಆನ್‌ಲೈನ್‌ನಲ್ಲಿ ಕಾಲ್ ಗರ್ಲ್ ಸೇವೆ ಪಡೆಯಲು ಹೋಗಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು 1.49 ಲಕ್ಷ ರೂ. ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಟೆಲಿಗ್ರಾಂನಲ್ಲಿ ಶುರುವಾದ ಕೃತ್ಯ
24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಟೆಲಿಗ್ರಾಮ್‌ನಲ್ಲಿ ಬಂದಿದ್ದ ಲಿಂಕ್ ಒಂದನ್ನು ಕ್ಲಿಕ್ ಮಾಡಿದ್ದರು. ಕಾಲ್ ಗರ್ಲ್ ಮತ್ತು ಸ್ಪಾ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡಿದ್ದ ‘ಇಶಾನಿ ರೆಡ್ಡಿ’ ಎಂಬುವವಳ ಜೊತೆ ಸಂವಹನ ನಡೆಸಿದ್ದಾರೆ. ಆರಂಭದಲ್ಲಿ 299 ರೂ. ಪಾವತಿಸುವಂತೆ ಹೇಳಿದ ಆಕೆ, ನಂತರ ವಿವಿಧ ಸೇವಾ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಳು.
ಹೀಗೆ, ಟೆಕ್ಕಿಯಿಂದ ಒಟ್ಟು 1,49,052 ರೂ.ಗಳನ್ನು ಆಕೆ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ. ಮೊತ್ತ ಹೆಚ್ಚಾಗಿದ್ದರಿಂದ ಅನುಮಾನಗೊಂಡ ಟೆಕ್ಕಿ, ಸೇವೆ ಬೇಡ ಎಂದು ಹೇಳಿ ಪಾವತಿಸಿದ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಾರೆ. ಆದರೆ, ವಂಚಕಿಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೆ, ಸಂಪರ್ಕ ಕಡಿತಗೊಂಡಿದೆ.
ವಂಚನೆಗೊಳಗಾದ ಟೆಕ್ಕಿ, ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿದ್ದಾರೆ. ನಂತರ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.