
ಬೆಂಗಳೂರು: ಬ್ಯಾಂಕ್ ಎಂದರೆ ನಂಬಿಕೆಗೆ ಮತ್ತೊಂದು ಹೆಸರು. ಆದರೆ ಇಲ್ಲೊಂದು ದಂಪತಿ ತಮ್ಮ ಕಷ್ಟದ ಕಾಲದಲ್ಲಿ ನೆರವಾಗಲೆಂದು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಒಡವೆಯನ್ನೇ ಬದಲಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅಸಲಿ ಚಿನ್ನವನ್ನು ನೀಡಿ ಸಾಲ ಪಡೆದಿದ್ದ ದಂಪತಿಗೆ, ಸಾಲ ತೀರಿಸಿದ ಬಳಿಕ ಬ್ಯಾಂಕ್ ನಕಲಿ ಚಿನ್ನವನ್ನು ನೀಡಿದೆ ಎನ್ನಲಾಗುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಸಂಚಲನ ಮೂಡಿಸಿದೆ.
ನಗರದ ಮಹಾಲಕ್ಷ್ಮೀ ಲೇಔಟ್ ನಿವಾಸಿಗಳಾದ ಮುಕೇಶ್ ಮತ್ತು ಪೂರ್ಣಿಮಾ ದಂಪತಿ ಈ ವಂಚನೆಯ ಸಂಚಿಗೆ ಒಳಗಾದವರು. ಸುಮಾರು 1 ವರ್ಷದ ಹಿಂದೆ ತುರ್ತು ಹಣದ ಅವಶ್ಯಕತೆಗಾಗಿ ಈ ದಂಪತಿ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಎಸ್‌ಬಿಐ (SBI) ಶಾಖೆಯಲ್ಲಿ ತಮ್ಮ ಬಳಿಯಿದ್ದ ಚಿನ್ನದ ಚೈನ್ ಅನ್ನು ಅಡಮಾನವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಪ್ರಾಮಾಣಿಕವಾಗಿ ಪ್ರತಿ ತಿಂಗಳು 11,700 ರೂಪಾಯಿಗಳಂತೆ ಅಸಲು ಮತ್ತು ಬಡ್ಡಿಯನ್ನು ಪಾವತಿಸುತ್ತಾ ಬಂದಿದ್ದ ದಂಪತಿ, ನಿನ್ನೆ ತಮ್ಮ ಸಂಪೂರ್ಣ ಸಾಲವನ್ನು ಚುಕ್ತಾ ಮಾಡಿ ಅಡವಿಟ್ಟಿದ್ದ ಒಡವೆಯನ್ನು ಮರಳಿ ಪಡೆದಿದ್ದಾರೆ.
ಮತ್ತೆ ಹಣದ ತುರ್ತು ಇದ್ದಿದ್ದರಿಂದ ದಂಪತಿ ಅದೇ ಚೈನ್ ಅನ್ನು ಮಾರಾಟ ಮಾಡಲು ಅಥವಾ ಬದಲಾಯಿಸಲು ಮಾರ್ವಾಡಿ ಅಂಗಡಿಯೊಂದಕ್ಕೆ ತೆರಳಿದ್ದಾರೆ. ಅಲ್ಲಿ ಒಡವೆಯನ್ನು ಪರೀಕ್ಷಿಸಿದಾಗ ಶಾಕಿಂಗ್ ಸತ್ಯ ಹೊರಬಿದ್ದಿದೆ. ಬ್ಯಾಂಕ್‌ನಿಂದ ಪಡೆದಿದ್ದ ಆ ಚೈನ್ ನಕಲಿ ಎಂದು ಜಕ್ಕಸಿನವರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕಂಗೆಟ್ಟ ದಂಪತಿ ತಕ್ಷಣ ಬ್ಯಾಂಕ್ ಶಾಖೆಗೆ ಧಾವಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಈ ಆರೋಪವನ್ನು ತಳ್ಳಿಹಾಕಿದ್ದಲ್ಲದೆ, ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ನಂಬಿಕಸ್ಥ ಬ್ಯಾಂಕ್‌ನಲ್ಲೇ ಈ ರೀತಿ ಅಕ್ರಮ ನಡೆದಿದೆ ಎಂದು ನೊಂದ ದಂಪತಿ ಈಗ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.




































