
ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿ ಅಕ್ರಮ ಸಂಬಂಧ ಮತ್ತು ಕ್ಷುಲ್ಲಕ ಕಾರಣದ ಗಲಾಟೆ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ, ತನ್ನ ಪ್ರೇಯಸಿ ಹಾಗೂ ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ತರಬನಹಳ್ಳಿಯಲ್ಲಿ ನಡೆದಿದೆ.
ಘಟನೆಯ ವಿವರ: ಬಂಧಿತ ಆರೋಪಿಯನ್ನು ಚಂದು ಅಲಿಯಾಸ್ ಪಾಂಡು ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, ಮಕ್ಕಳು ಸಹ ಇದ್ದಾರೆ. ಸುಮಾರು 6 ವರ್ಷಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಸುಮಲತಾ ಎಂಬಾಕೆಯ ಪರಿಚಯವಾಗಿತ್ತು. ಸುಮಲತಾಗೂ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಗಂಡನಿಗೆ ವಿಷಯ ತಿಳಿದ ನಂತರ ಸುಮಲತಾ ಚಂದು ಜೊತೆ ವಾಸಿಸಲು ಆರಂಭಿಸಿದ್ದಳು.
ಕಿರುಕುಳ ಮತ್ತು ಸಂಘರ್ಷ: ಆರಂಭದಲ್ಲಿ ಚೆನ್ನಾಗಿದ್ದ ಚಂದು, ನಂತರದ ದಿನಗಳಲ್ಲಿ ಸುಮಲತಾಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಶುರುಮಾಡಿದ್ದನು. ಅಷ್ಟೇ ಅಲ್ಲದೆ, 10 ವರ್ಷದ ಮಗನಿರುವ ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತಂದು ಇರಿಸಿಕೊಂಡಿದ್ದನು. ಇದನ್ನು ಸುಮಲತಾ ವಿರೋಧಿಸಿದಾಗ ಇಬ್ಬರ ನಡುವೆ ಬಿರುಕು ಮೂಡಿ, ಆಕೆ ಚಂದುವಿನಿಂದ ದೂರವಾಗಿದ್ದಳು.
ಬೈಕ್ ವಿವಾದಕ್ಕೆ ಹೊತ್ತಿಕೊಂಡಿತು ಬೆಂಕಿ: ಮಾರ್ಚ್ 6ರ ಶುಕ್ರವಾರ ಸಂಜೆ 6 ಗಂಟೆಯ ಸುಮಾರಿಗೆ ಬೈಕ್ ನೀಡುವ ವಿಚಾರವಾಗಿ ಚಂದು ಮತ್ತು ಸುಮಲತಾ ಕುಟುಂಬದ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸುಮಲತಾ ಮತ್ತು ಆಕೆಯ ಪೋಷಕರಾದ ಶ್ರೀರಾಮುಲು ಹಾಗೂ ಮಂಜಮ್ಮ ಬೈಕ್ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಚಂದು, ತನ್ನಲ್ಲಿದ್ದ ಪೆಟ್ರೋಲ್ ಅನ್ನು ಮೂವರ ಮೇಲೆ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ: ಬೆಂಕಿಯ ಜ್ವಾಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೂವರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಲತಾ ಮತ್ತು ಶ್ರೀರಾಮುಲು ಪ್ರಾಣಾಪಾಯದಿಂದ ಪಾರಾಗಿದ್ದರೂ, ತಾಯಿ ಮಂಜಮ್ಮ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಹಿಂದೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿಯೂ ಈ ಸಂಬಂಧ ದೂರು ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿ ಚಂದುವನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.



































