
ಬೆಂಗಳೂರು: ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕರೊಬ್ಬರು ಗ್ರಾಹಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಕೋಟ್ಯಾಂತರ ರೂಪಾಯಿ ಹಣದೊಂದಿಗೆ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಬೃಹತ್ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆರೋಪಿಯ ಬಂಧನಕ್ಕಾಗಿ ಈಗ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಬೆಂಗಳೂರಿನ ಮಲ್ಲೇಶ್ವರಂ ಪ್ರಾದೇಶಿಕ ಕಚೇರಿಯ ವ್ಯಾಪ್ತಿಗೆ ಬರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್. ರಘು ಎಂಬುವವರೇ ಈ ಕೃತ್ಯ ಎಸಗಿದ ಆರೋಪಿ. ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕಬೀಂದ್ರ ಕುಮಾರ್ ಸಾಹು ಅವರು ನೀಡಿದ ದೂರಿನ ಅನ್ವಯ ತನಿಖೆ ಚುರುಕುಗೊಂಡಿದೆ. ಆರೋಪಿ ರಘು ಸುಮಾರು 41 ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 3 ಕೋಟಿಗೂ ಅಧಿಕ ಮೊತ್ತವನ್ನು ಲಪಟಾಯಿಸಿ ತಲೆಮರೆಸಿಕೊಂಡಿದ್ದಾರೆ.
ತನಿಖೆಯ ವೇಳೆ ತಿಳಿದುಬಂದಂತೆ, ರಘು ಅವರು ತಮಗೆ ಪರಿಚಯವಿದ್ದ ಗ್ರಾಹಕರಿಗೆ “ನನ್ನ ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆ, ನನ್ನ ಬಳಿ ಇರುವ ಚಿನ್ನವನ್ನು ನಿಮ್ಮ ಹೆಸರಿನಲ್ಲಿ ಅಡವಿಟ್ಟು ಸಾಲ ಪಡೆಯುತ್ತೇನೆ” ಎಂದು ನಂಬಿಸಿದ್ದರು. ಬ್ಯಾಂಕ್ ಮ್ಯಾನೇಜರ್ ಸ್ಥಾನದಲ್ಲಿದ್ದ ವ್ಯಕ್ತಿಯ ಮಾತು ನಂಬಿದ ಗ್ರಾಹಕರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ಒಟಿಪಿ (OTP) ಹಂಚಿಕೊಂಡಿದ್ದರು. ಇದನ್ನು ದುರುಪಯೋಗಪಡಿಸಿಕೊಂಡ ರಘು, ಬ್ಯಾಂಕಿನಲ್ಲಿ ಯಾವುದೇ ಭೌತಿಕ ಚಿನ್ನವನ್ನು ಅಡಮಾನ ಇಡದೆಯೇ ಕಾಗದದ ಮೇಲೆ ಸಾಲ ಮಂಜೂರು ಮಾಡಿಕೊಂಡು, ಹಣವನ್ನು ನೇರವಾಗಿ ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದರು.
ಬ್ಯಾಂಕಿನ ನಿಯಮಿತ ತ್ರೈಮಾಸಿಕ ಆಡಿಟಿಂಗ್ (ಲೆಕ್ಕ ಪರಿಶೋಧನೆ) ನಡೆದಾಗ ಈ ಭೀಕರ ಹಗರಣ ಬಯಲಾಗಿದೆ. ಸಾಲದ ದಾಖಲೆಗಳಿದ್ದರೂ ಲಾಕರ್‌ನಲ್ಲಿ ಚಿನ್ನ ಇಲ್ಲದಿರುವುದನ್ನು ಕಂಡು ಅಧಿಕಾರಿಗಳು ದಬಾಯಿಸಿದಾಗ ವಂಚನೆ ಪತ್ತೆಯಾಗಿದೆ. ಸದ್ಯ ಆರೋಪಿ ಆಂಧ್ರಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಉತ್ತರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡವೊಂದು ನೆರೆ ರಾಜ್ಯಕ್ಕೆ ತೆರಳಿದೆ.



































