
ಬೆಂಗಳೂರು: ರಾಜ್ಯಾದ್ಯಂತ ಸರ್ಕಾರ ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲಿಯ ನೀರಿನ ಬಳಕೆಗೆ ಸಂಪೂರ್ಣ ನಿಷೇಧ ಹೇರಲು ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಇದೀಗ ಪ್ಲಾಸ್ಟಿಕ್ ಬಾಟಲಿಯ ನೀರಿನ ಬದಲು ಗ್ಲಾಸ್, ಸ್ಟೀಲ್ ಅಥವಾ ಪೇಪರ್ ಲೋಟಗಳಲ್ಲಿ ಮಾತ್ರ ನೀರು ಪೂರೈಕೆ ಮಾಡಬೇಕು ಎಂದು ಸರ್ಕಾರ ಕಡ್ಡಾಯ ಸೂಚನೆ ನೀಡಿದೆ.
ಪರಿಸರ ಸಂರಕ್ಷಣೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಹಾಗೂ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2016ರಲ್ಲಿ ರಾಜ್ಯ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ನಿಷೇಧಕ್ಕೆ ಆದೇಶ ಹೊರಡಿಸಿದ್ದರೂ, ಸರಿಯಾಗಿ ಅನುಷ್ಠಾನವಾಗದ ಕಾರಣ ಮತ್ತೊಮ್ಮೆ ಖಡಕ್ ನಿಯಮ ಜಾರಿಗೆ ತಂದಿದೆ.
ಸರ್ಕಾರಿ ಕಚೇರಿಗಳಲ್ಲೂ ಕಟ್ಟುನಿಟ್ಟಿನ ನಿಯಮ
ಸಚಿವಾಲಯ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಮಂಡಳಿಗಳು, ನಿಗಮಗಳು, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರಿ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು ಈ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಯ ನೀರನ್ನು ಬಳಸಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪಾಲಿಸದಿದ್ದರೆ ಕಠಿಣ ಕ್ರಮ
ಈ ಆದೇಶ ಉಲ್ಲಂಘನೆ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮ್ಮ ಅಧೀನದ ಎಲ್ಲಾ ಸಂಸ್ಥೆಗಳಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.