
ಹೊಸದಿಲ್ಲಿ: ದಶಕಗಳ ಹಿಂದಿನಿಂದ ಪಾಕಿಸ್ತಾನದ ವಿರುದ್ಧ ಹೋರಾಟ ನಡೆಸುತ್ತಿರುವ ಬಲೂಚ್ ಪ್ರತ್ಯೇಕತಾವಾದಿಗಳಿಗೆ ಬಲ ನೀಡುವಂತ ಬೆಳವಣಿಗೆಯೊಂದರಲ್ಲಿ, ಬುಧವಾರ ಬಲೂಚಿಸ್ತಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಣೆ ಮಾಡಲಾಗಿದೆ. ಈ ಘೋಷಣೆಯೊಂದಿಗೆ ಆಪರೇಷನ್ ಸಿಂದೂರ ಕಾರ್ಯಾಚರಣೆಯಿಂದಾಗಿಯೇ ಅಸ್ಥಿರಗೊಂಡಿರುವ ಪಾಕಿಸ್ತಾನಕ್ಕೆ ಮತ್ತೊಂದು ತೀವ್ರ ಆಂತರಿಕ ಹೊಡೆತಬಿದ್ದಂತಾಗಿದೆ.
ಈ ಘೋಷಣೆಯನ್ನು ಬಲೂಚ್ ಪ್ರತ್ಯೇಕತಾವಾದಿ ನಾಯಕ ಹಾಗೂ ಬರಹಗಾರ ಮೀರ್ ಯಾರ್ ಬಲೂಚ್ ಟ್ವಿಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. “ಬಲೂಚಿಸ್ತಾನ ಈಗ ಸ್ವತಂತ್ರವಾಗಿದೆ” ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಬಲ್ಲೋಚಿಸ್ತಾನ್ ಪ್ರಾಂತ್ಯದಲ್ಲಿರುವ ದೇರಾಬುಗ್ತಿ ಪ್ರದೇಶದ ಶತಕ್ಕೂ ಹೆಚ್ಚು ಅನಿಲ ಬಾವಿಗಳ ಮೇಲೆ ಬಲೂಚಿಸ್ಥಾನ ಹೋರಾಟಗಾರರು ನಿಯಂತ್ರಣ ಸಾಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೀರ್ ಯಾರ್ ಬಲೂಚ್ ಅವರು ವಿಶ್ವಸಂಸ್ಥೆಗೆ ಮತ್ತು ಭಾರತ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನುಇಟ್ಟಿದ್ದಾರೆ. ಅವರ ಮಾತಿನಲ್ಲಿ, ಬಲೂಚಿಸ್ತಾನಕ್ಕೆ ಪ್ರತ್ಯೇಕ ರಾಷ್ಟ್ರದ ಮಾನ್ಯತೆ ನೀಡಬೇಕು, ಭಾರತದಲ್ಲಿ ರಾಯಭಾರ ಕಚೇರಿ ತೆರೆಯಲು ಅವಕಾಶ ಕಲ್ಪಿಸಬೇಕು, ಬಲೂಚಿಸ್ತಾನ ತನ್ನದೇ ಆದ ಕರೆನ್ಸಿ ಮತ್ತು ಪಾಸ್‌ಪೋರ್ಟ್ ಮುದ್ರಿಸಲು ಅನುಮತಿ ಹಾಗೂ ಆರ್ಥಿಕ ನೆರವು ನೀಡಬೇಕು ಎಂಬ ಬೇಡಿಕೆಗಳು ಇವೆ.
ಇತ್ತೀಚೆಗಿನ “ಆಪರೇಷನ್ ಸಿಂದೂರ” ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೂ, ಭೀತಿಗೂ ಕಾರಣವಾಗಿದ್ದರೆ, ಅದರ ಬೆನ್ನಲ್ಲೇ ಬಲೂಚಿಸ್ತಾನದ ಈ ಸ್ವಾತಂತ್ರ್ಯ ಘೋಷಣೆ ಅಲ್ಲಿ ಆಂತರಿಕ ರಾಜಕೀಯ ಹಾಗೂ ಭದ್ರತಾ ಸ್ಥಿತಿಗತಿಗಳನ್ನು ಮತ್ತಷ್ಟು ತೀವ್ರಗೊಳಿಸಿದೆ.
ರಾಜಕೀಯ ವಿಶ್ಲೇಷಕರು ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇದು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕಾರಣದ ಮೇಲೆ ಮಹತ್ವದ ಪರಿಣಾಮ ಬೀರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.