
ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮಾಲೀಕತ್ವದ ಜಿ ಸ್ಕ್ವೇರ್ ಲೇಔಟ್‌ನಲ್ಲಿದ್ದ ಮಾಡೆಲ್ ಹೌಸ್ ಶನಿವಾರ (ಜ.24) ಬೆಳಿಗ್ಗೆ ಅಗ್ನಿಗಾಹುತಿಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಲು ‘ರೀಲ್ಸ್’ ಮಾಡಲು ಹೋಗಿ ಈ ಅವಘಡ ಸಂಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಘಟನೆಯ ವಿವರ: ರೀಲ್ಸ್ ಗೀಳಿನಿಂದ ಹೊತ್ತಿದ ಬೆಂಕಿ
ಬಳ್ಳಾರಿಯ ಹೊರವಲಯದಲ್ಲಿರುವ ಜಿ ಸ್ಕ್ವೇರ್ ಲೇಔಟ್‌ನ ಪ್ರದರ್ಶನಕ್ಕಾಗಿ ನಿರ್ಮಿಸಲಾಗಿದ್ದ ಈ ಮಾಡೆಲ್ ಹೌಸ್ ಕಳೆದ ಹಲವು ವರ್ಷಗಳಿಂದ ಬಳಕೆಯಿಲ್ಲದೆ ಖಾಲಿ ಬಿದ್ದಿತ್ತು. ಇದನ್ನೇ ಆಸರೆಯಾಗಿಟ್ಟುಕೊಂಡ ಒಂದು ತಂಡ ಫೋಟೋಶೂಟ್ ಹಾಗೂ ರೀಲ್ಸ್ ಚಿತ್ರೀಕರಣಕ್ಕಾಗಿ ಇಲ್ಲಿಗೆ ಆಗಮಿಸಿತ್ತು. ಪೊಲೀಸರು ವಶಕ್ಕೆ ಪಡೆದಿರುವ 8 ಮಂದಿಯಲ್ಲಿ 6 ಮಂದಿ ಅಪ್ರಾಪ್ತರಾಗಿದ್ದು, ಉಳಿದ ಇಬ್ಬರು ಮೇಜರ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಮಾಹಿತಿ ನೀಡಿದ್ದಾರೆ.
ತನಿಖೆಯ ಹಂತ ಮತ್ತು ಮುನ್ನೆಚ್ಚರಿಕೆ
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಭೇಟಿ ನೀಡಿ ಸೂಕ್ಷ್ಮ ಪರಿಶೀಲನೆ ನಡೆಸಿದೆ. ಸ್ಥಳೀಯ ಪೊಲೀಸರು ತಂಡದೊಂದಿಗೆ ಸಮನ್ವಯ ಸಾಧಿಸಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಮನೆಯ ಒಳಭಾಗದಲ್ಲಿ ಯಾವುದೇ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳಿರಲಿಲ್ಲ ಎಂದು ತಿಳಿದುಬಂದಿದೆ. ಬೆಂಕಿಪೊಟ್ಟಣದಿಂದ ಆಕಸ್ಮಿಕವಾಗಿ ಕಿಡಿ ಹೊತ್ತಿಕೊಂಡಿರುವುದು ವಶಕ್ಕೆ ಪಡೆದವರ ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿರುವ ವಿಡಿಯೋಗಳಿಂದ ದೃಢಪಟ್ಟಿದೆ. ಯಾವುದೇ ಭದ್ರತಾ ಸಿಬ್ಬಂದಿ ಅಥವಾ ಸಿಸಿಟಿವಿ ಇಲ್ಲದ ಕಾರಣ ದುಷ್ಕರ್ಮಿಗಳಿಗೆ ಪ್ರವೇಶ ಸುಲಭವಾಗಿತ್ತು ಎನ್ನಲಾಗಿದೆ.



































