
ಮಂಗಳೂರು, ಬಜಪೆ: ರೌಡಿ ಶೀಟರ್ ಒಬ್ಬ ಮತ್ತೊಬ್ಬ ಸಹಚರನೊಂದಿಗೆ ಸೇರಿಕೊಂಡು ಬಜಪೆಯ ಪಟಾಕಿ ಅಂಗಡಿ ಮಾಲೀಕನಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫಾಝಿಲ್ ಕೊಲೆ ಪ್ರಕರಣದ ಆರೋಪಿ, ರೌಡಿ ಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಮತ್ತು ಆತನ ಸಹಚರ ಅಶ್ವಿತ್ ಎಂಬುವವರ ವಿರುದ್ಧ ಬಜಪೆಯಲ್ಲಿ ಪಟಾಕಿ ಅಂಗಡಿ ಹೊಂದಿರುವ ದಾಮೋದರ್ ಅವರು ದೂರು ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ಅಕ್ಟೋಬರ್ 22 ರಂದು ಆರೋಪಿಗಳಿಬ್ಬರೂ ದಾಮೋದರ್ ಅವರ ಅಂಗಡಿಗೆ ತೆರಳಿ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ರೌಡಿ ಶೀಟರ್‌ನ ಬೆದರಿಕೆಗೆ ಹೆದರಿದ ಮಾಲೀಕರು ಕೂಡಲೇ ದೂರು ನೀಡಲು ಹಿಂಜರಿದ್ದರು. ಆದರೆ, ಪೊಲೀಸರು ಸಮಗ್ರ ರಕ್ಷಣೆ ನೀಡುವ ಭರವಸೆ ನೀಡಿದ ನಂತರ, ಅವರು ಧೈರ್ಯ ಮಾಡಿ ಗುರುವಾರ (ಅಕ್ಟೋಬರ್ 24) ಬಜಪೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ದಾಮೋದರ ಅವರ ದೂರಿನನ್ವಯ ಬಜಪೆ ಪೊಲೀಸರು ಇಬ್ಬರೂ ಆರೋಪಿಗಳ ವಿರುದ್ಧ ಸುಲಿಗೆ ಯತ್ನ ಮತ್ತು ಬೆದರಿಕೆ ಹಾಕಿದ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಬಜಪೆ ಪೊಲೀಸ್ ಅಧಿಕಾರಿಗಳು ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.



































