
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ಗ್ರಾಮದಲ್ಲಿ ದಂಪತಿಗಳಿಬ್ಬರ ಸಾವು ಇಡೀ ಊರನ್ನು ದುಃಖದಲ್ಲಿ ಮುಳುಗಿಸಿದೆ. ತುಳಸಿ ಪೂಜೆ ಮುಗಿಸಿ ಖುಷಿಯಿಂದಲೇ ಇದ್ದ ಪತಿಗೆ ಅಚಾನಕ್ ಆಗಿ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.
ಪತಿಯ ಶವ ಕಂಡು ಪತ್ನಿಯೂ ನಿಧನ
ಮೃತ ಶಶಿಧರ್ ಪತ್ತಾರ (40) ಅವರು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಶಶಿಧರ್ ಅವರು ಪತ್ನಿ ಸರೋಜಿನಿ (35) ಜೊತೆ ತುಳಸಿ ಪೂಜೆ ಮಾಡಿ ಸಂತೋಷದಿಂದ ಕಾಲ ಕಳೆದಿದ್ದರು. ಆನಂತರ ಶಶಿಧರ್ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲಿಯೇ ಶಶಿಧರ್ ಉಸಿರು ಚೆಲ್ಲಿದ್ದಾರೆ.
ಪತಿಯ ಮೃತಪಟ್ಟಿರುವ ವಿಷಯ ತಿಳಿಯದೆ ಆಸ್ಪತ್ರೆಗೆ ಬಂದ ಪತ್ನಿ ಸರೋಜಿನಿ ಅವರು ಗಂಡನ ಶವ ಕಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಪತಿಯ ಮೃತದೇಹದ ಎದುರೇ ತೀವ್ರ ಹೃದಯಾಘಾತ (ಹಾರ್ಟ್ ಅಟ್ಯಾಕ್) ಆಗಿ ಸರೋಜಿನಿ ಕೂಡ ಪ್ರಾಣ ಬಿಟ್ಟಿದ್ದಾರೆ. ಈ ದಂಪತಿ ಸಾವಿನಲ್ಲೂ ಒಂದಾಗಿದ್ದು, ಈ ದಾರುಣ ಘಟನೆ ಊರ ಜನರನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಮಕ್ಕಳು ಅನಾಥ; ವಿಚಿತ್ರ ಕಾಕತಾಳೀಯ
ಕಳೆದ 15 ವರ್ಷಗಳಿಂದ ಸಂಸಾರ ನಡೆಸುತ್ತಿದ್ದ ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು, ಇದೀಗ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮೃತ ಸರೋಜಿನಿಗೆ ನಾಲ್ವರು ಸಹೋದರಿಯರಿದ್ದು, ಮೂವರು ಈಗಾಗಲೇ ಮೃತಪಟ್ಟಿದ್ದಾರೆ. ಸರೋಜಿನಿ ಸೇರಿ ಉಳಿದ ಮೂರೂ ಸಹೋದರಿಯರು ತುಳಸಿ ಪೂಜೆಯ ಸಂದರ್ಭದಲ್ಲಿಯೇ ಮೃತಪಟ್ಟಿರುವುದು ಆಶ್ಚರ್ಯಕರ ಸಂಗತಿಯಾಗಿದೆ.




































