
ಮುಂಬೈ: ಎನ್‌ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಖಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಶಂಕಿತನಾಗಿದ್ದ ಝೀಶಾನ್ ಅಖ್ತರ್ ನನ್ನು ಕೆನಡಾದಲ್ಲಿ ಬಂಧಿಸಲಾಗಿದೆ. ಮಂಗಳವಾರ (ಜೂನ್ 10) ಈತನನ್ನು ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮುಂಬೈ ಪೊಲೀಸ್ ಮೂಲಗಳು ದೃಢಪಡಿಸಿವೆ.
2024ರ ಅಕ್ಟೋಬರ್ 12ರಂದು, ಸಿದ್ದಿಖಿಯ ಪುತ್ರ ಶಾಸಕ ಝೀಶಾನ್ ಸಿದ್ದಿಖಿಯ ಕಚೇರಿಯ ಹೊರಭಾಗದಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣದಲ್ಲಿ ಮೂರು ಅಪರಿಚಿತರು ಬಾಬಾ ಸಿದ್ದಿಖಿಯನ್ನು ಹೊಡೆದುರುಳಿಸಿದ್ದರು. ಈ ಪ್ರಕರಣದ ಪ್ರಮುಖ ಮಾಸ್ಟರ್‌ಮೈಂಡ್ ಆಗಿ ಗುರುತಿಸಲ್ಪಟ್ಟ ಝೀಶಾನ್ ಅಖ್ತರ್ ಘಟನೆಯ ನಂತರ ದೇಶದಿಂದ ಪರಾರಿಯಾಗಿದ್ದ.
ಪೊಲೀಸ್ ತನಿಖೆ ಪ್ರಕಾರ, ಅಖ್ತರ್ ಲಾರೆನ್ಸ್ ಬಿಷ್ನೋಯ್ ನ ಆಪ್ತನಾಗಿದ್ದು, ವಿಕ್ರಮ್ ಬ್ರಾರ್ ಗ್ಯಾಂಗ್‌ನ ಜೊತೆಗೂ ಸಹ ನಂಟು ಹೊಂದಿದ್ದ ಎನ್ನಲಾಗಿದೆ. ಈತನ ವಿರುದ್ಧ ಹೆಚ್ಚಿನ ಆರೋಪಗಳು ಹೊರಬಿದ್ದಿದ್ದು, ಭಾರತದಿಂದ ಹೊರದೇಶಕ್ಕೆ ಹೇಗೆ ಪರಾರಿಯಾದ ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ಈ ಮುಂಚೆ, ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ವೋಹ್ರಾ ಮತ್ತು ಆಕಾಶ್ ದೀಪ್ ಸಿಂಗ್ ಎಂಬ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇದೀಗ ಝೀಶಾನ್ ಅಖ್ತರ್ ನ ಬಂಧನದೊಂದಿಗೆ ಪ್ರಕರಣದ ತನಿಖೆಯು ಹೊಸ ತಿರುವು ಪಡೆಯುತ್ತಿದೆ.