
ಬೆಂಗಳೂರು : ಪತಿ ಹಾಗೂ ಆತನ ಕುಟುಂಬದವರು ಮಾನಸಿಕ, ದೈಹಿಕ ಹಿಂಸೆ ನೀಡಿದರಲ್ಲದೆ, ಪ್ರಾಣ ಬೆದರಿಕೆ, ಗರ್ಭಪಾತದ ಜबरದಸ್ತಿ, ಮತ್ತು ಹಣಕ್ಕಾಗಿ ರಾಜಕಾರಣಿಗೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆಂಬ ಭಯಾನಕ ದೂರನ್ನು 21 ವರ್ಷದ ಯುವತಿಯೊಬ್ಬರು ಬನಶಂಕರಿ ಪೊಲೀಸ್ ಠಾಣೆಗೆ ಸಲ್ಲಿಸಿದ್ದಾರೆ. ಈ ದೂರು ಸ್ವೀಕರಿಸಿರುವ ಪೊಲೀಸರು ಪತಿ ಯೂನಸ್ ಪಾಷಾ, ಮಾವ ಚಾಂದ್ ಪಾಷಾ ಮತ್ತು ಅತ್ತೆ ಶಹೀನ್ ತಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವಿವಾಹದ ನಂತರ ಆರಂಭವಾದ ಕಿರುಕುಳ :
ಸಂತ್ರಸ್ತೆಯು 2021ರ ಜೂನ್ 25ರಂದು ಯೂನಸ್ ಪಾಷಾವನ್ನು ವಿವಾಹವಾಗಿದ್ದರು. ಮದುವೆಯ ನಂತರ ಕೆಲವೇ ತಿಂಗಳಲ್ಲಿ ಪತಿ ಮತ್ತು ಆತನ ಕುಟುಂಬದವರು ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ. ಗರ್ಭವತಿಯಾದ ಸಂದರ್ಭದಲ್ಲಿ ಪತಿ ಹೊಟ್ಟೆಗೆ ಒದ್ದು ಔಪಚಾರಿಕವಾಗಿ ಗರ್ಭಪಾತ ಮಾಡಲು ಒತ್ತಾಯಿಸಿದ್ದು, 2021ರ ಡಿಸೆಂಬರ್ 17ರಂದು ಗರ್ಭಪಾತ ಮಾಡಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣಕ್ಕಾಗಿ ರಾಜಕೀಯ ವ್ಯಕ್ತಿಗೆ ಮಾರಾಟ ಯತ್ನ:
ಹಣಕ್ಕಾಗಿ ತನ್ನನ್ನು ರಾಜಕಾರಣಿಗೆ ಮಾರಾಟ ಮಾಡಲು ಪತಿಯ ಯೋಜನೆ ಬಗ್ಗೆ ತಾನು ಅರಿತಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಸಂತ್ರಸ್ತೆ ಗಂಡನ ಮನೆಯಿಂದ ತಪ್ಪಿಸಿಕೊಂಡು ಕಳೆದ ಎರಡು ತಿಂಗಳಿನಿಂದ ತಾಯಿಯೊಂದಿಗೆ ವಾಸವಿದ್ದಾಳೆ.
ಚಾಕು ಹಿಡಿದು ಬೆದರಿಕೆ – ಸಾರ್ವಜನಿಕವಾಗಿ ‘ತಲಾಖ್’:
2024ರ ಜೂನ್ 4ರಂದು ಪತಿಯ ಮನೆಗೆ ತನ್ನ ಬಟ್ಟೆಗಳನ್ನು ತರುವ ಉದ್ದೇಶದಿಂದ ಹೋದಾಗ, ಪತಿ ಯೂನಸ್ ಪಾಷಾ ಮತ್ತು ಆತನ ಕುಟುಂಬದವರು ತಾಯಿಯೊಂದಿಗೆ ಸೇರಿ ಚಾಕು ಹಿಡಿದು ತೊಡೆಯ ಮೇಲೆ ಇರಿಸಿ ಬೆದರಿಕೆ ಹಾಕಿದ್ದ. ಅಲ್ಲದೆ ಎಲ್ಲರ ಮುಂದೆ ಆಕೆಗೆ ಆರು ಬಾರಿ “ತಲಾಖ್” ಘೋಷಿಸಿ ವಿಚ್ಛೇದನೆ ನೀಡಿದ್ದಾನೆ.
ತಲೆಗೆ ಗನ್ ಇಟ್ಟು ಜೀವ ಬೆದರಿಕೆ:
ಪತ್ನಿಯು ಆತನ ನಡವಳಿಕೆಯ ಬಗ್ಗೆ ಪ್ರಶ್ನಿಸಿದಾಗ ಪತಿ ಗನ್ ತೋರಿಸಿ ತಲೆಗೆ ಇಟ್ಟು ಬೆದರಿಕೆ ಹಾಕುತ್ತಿದ್ದ. ಮಹಿಳೆಯ ತಂದೆ ಮತ್ತು ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. 2023ರಲ್ಲಿ ಆಕೆಯ ಮೇಲೆ ಗಂಭೀರ ಹಲ್ಲೆ ಕೂಡ ನಡೆದಿತ್ತು ಎಂದು ಎಫ್‌ಐಆರ್‌ನ ವಿವರಗಳು ತಿಳಿಸುತ್ತವೆ.