
ಬೆಳ್ತಂಗಡಿ : ಕೆಲಸದ ನಿಮಿತ್ತ ಬೈಕ್ ಸಮೇತ ನದಿಯನ್ನು ದಾಟುತ್ತಿದ್ದ ಇಬ್ಬರು ಯುವಕರು, ನದಿಯಲ್ಲಿ ಬೈಕ್ ಕೊಚ್ಚಿ ಹೋದರೂ ತಮ್ಮ ಚಾತುರ್ಯದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಿತ್ತಿಲಪೇಲ ಪ್ರದೇಶದಲ್ಲಿ ನಡೆದಿದೆ.
ಕರಿಯ ಮಲೆಕುಡಿಯ ಎಂಬುವವರ ಮಗ ಸತೀಶ್ ಹಾಗೂ ಸುಳ್ಯೋಡಿ ಮೂಲದ ಸಂಜೀವ ಪೂಜಾರಿ ಎಂಬ ಯುವಕರು, ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಹಿತ್ತಿಲಪೇಲ ಕಡೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ನಡುವೆ ಕೂಡುಜಾಲು ಎಂಬಲ್ಲಿ ಹರಿಯುತ್ತಿದ್ದ ನದಿಯನ್ನು ಬೈಕ್ ಸಮೇತ ದಾಟುವ ಸಂದರ್ಭದಲ್ಲಿ , ಆಕಸ್ಮಿಕವಾಗಿ ನೀರಿನ ಪ್ರವಾಹಕ್ಕೆ ಬೈಕ್ ಕೊಚ್ಚಿ ಹೋಗಿದೆ.
ಘಟನೆಯ ಸಮಯದಲ್ಲಿ ತಕ್ಷಣ ಪ್ರತಿಕ್ರಿಯಿಸಿದ ಯುವಕರು ಸಮೀಪದಲ್ಲಿದ್ದ ಬಳ್ಳಿಯನ್ನು ಹಿಡಿದು ಸಿನಿಮೀಯ ಶೈಲಿಯಲ್ಲಿ ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ಬೈಕ್ ನದಿಯಲ್ಲಿ ಕೊಚ್ಚಿಹೋದರೂ ಜೀವ ಉಳಿದಿರುವುದೇ ಭಾಗ್ಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.