
ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ, ತೀವ್ರ ಅಸಹನೆ ವ್ಯಕ್ತಪಡಿಸಿ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಭರಮನಿ ಅವರು ಬರೆದಿರುವ ಭಾವನಾತ್ಮಕ ನಿವೃತ್ತಿ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಬೇಸರವನ್ನು ಉಂಟು ಮಾಡುತ್ತಿದೆ.
ಪತ್ರದಲ್ಲಿ ಭರಮನಿ ತಮ್ಮ ಅಂತರಂಗದ ನೋವನ್ನು ಹಂಚಿಕೊಂಡಿದ್ದಾರೆ – “ಸಾರ್ವಜನಿಕವಾಗಿ ನನ್ನನ್ನು ತಲೆತಗ್ಗಿಸುವ ರೀತಿಯಲ್ಲಿ ನಡೆದುಕೊಂಡು, ಸರಕಾರದಿಂದ ಯಾವುದೇ ಸಹಾನುಭೂತಿ ವ್ಯಕ್ತವಾಗದದ್ದು ನನ್ನನ್ನು ಅತೀ ಹೆಚ್ಚು ನೋಯಿಸಿತು. ನಾನು ನಿಷ್ಕಳಂಕ. ಯಾರೋ ಮಾಡಿದ್ದ ತಪ್ಪಿಗೆ ನನ್ನ ಮೇಲೆ ದೋಷಾರೋಪ ಮಾಡಲಾಗಿದೆ.”
31 ವರ್ಷಗಳ ಸೇವಾ ಪಯಣದಲ್ಲಿ ಒಂದು ಬಾರಿಯೂ ತಮಗೆ ಈ ರೀತಿಯ ಅವಮಾನ ಎದುರಾಗಿಲ್ಲವೆಂಬ ಬೇಸರವನ್ನು ಭರಮನಿ ಅವರು ವ್ಯಕ್ತಪಡಿಸಿದ್ದಾರೆ. “ಮಾಧ್ಯಮಗಳಲ್ಲಿ ನನ್ನ ಅವಮಾನ ಪ್ರಸಾರವಾದಾಗ, ನನ್ನ ಪತ್ನಿ, ಮಕ್ಕಳು, ಬಂಧುಗಳು ಎಲ್ಲರೂ ನೋವಿಗೆ ಒಳಗಾದರು. ನಾನು ಯಾರ ಫೋನ್‌ಗೂ ಉತ್ತರಿಸದ ಸ್ಥಿತಿಗೆ ತಲುಪಿದೆ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಈ ಘಟನೆಗೆ ನ್ಯಾಯ ಸಿಗುವ ವಿಶ್ವಾಸ ಇಲ್ಲದ ಕಾರಣ, “ನಿಮ್ಮ ತಪ್ಪಿಗೆ ನಾನು ಶಿಷ್ಟಾಚಾರ ಬಲಿ ಆಗುತ್ತಿದ್ದೇನೆ” ಎಂಬ ಭಾರವಾದ ಮನಸ್ಸಿನಿಂದ ಅವರು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದಾರೆ.
ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಅಥವಾ ಸರಕಾರದ ಯಾವ ಅಧಿಕಾರಿಯು ಇದುವರೆಗೂ ಈ ಕುರಿತಂತೆ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಭರಮನಿಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ ಮತ್ತು ಸರ್ಕಾರದ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.