
ಕಾಸರಗೋಡು: ಮಧುವಾಹಿನಿ ನದಿಯ ತಟದಲ್ಲಿರುವ ಐತಿಹಾಸಿಕ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ನಂತರ ಮತ್ತೊಮ್ಮೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ನಡೆಯಲಿದೆ. ಈ ಉತ್ಸವಗಳು ಮಾರ್ಚ್ 27ರಿಂದ ಏಪ್ರಿಲ್ 7ರ ವರೆಗೆ ನಡೆಯಲಿವೆ. ದೇವಸ್ಥಾನದ ನವೀಕರಣ ಮತ್ತು ಇತರ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ದೇಗುಲದ ನವೀಕರಣ ಕಾರ್ಯಗಳು ಪೂರ್ಣಗೊಂಡಿವೆ. ದೇವಾಲಯದ ರಾಜಾಂಗಣ ಮತ್ತು ಹೊರಾಂಗಣದ ಕೆಲಸಗಳು ಸಂಪೂರ್ಣಗೊಂಡು, ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ ಮತ್ತು ಸುತ್ತು ಪೌಳಿಗೆಗಳಿಗೆ ಕೆಂಪು ಕಲ್ಲು ಹಾಸಲಾಗಿದೆ. ಹೊಸದಾಗಿ ಕಗ್ಗಲ್ಲಿನಿಂದ ನಿರ್ಮಿಸಲಾದ ಕೆತ್ತನೆ ಕೆಲಸದ ಕಂಬಗಳು ಮತ್ತು ಕಾಷ್ಠ ಶಿಲ್ಪಗಳು ಸಂದರ್ಶಕರನ್ನು ಆಕರ್ಷಿಸುತ್ತಿವೆ. ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಅವರ ಬಳಗವು ಅತ್ಯಾಧುನಿಕ ಕೆತ್ತನೆ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕಾಷ್ಠ ಶಿಲ್ಪಗಳನ್ನು ಮೂಡುಬಿದಿರೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ನಿರ್ಮಿಸಿದ್ದಾರೆ.
ದೇವಸ್ಥಾನದ ಸುತ್ತಲೂ ಸುಮಾರು 2-3 ತಿಂಗಳಿಂದ ಸ್ಥಳೀಯರು, ಮಕ್ಕಳು ಮತ್ತು ಮಹಿಳೆಯರು ಸಹ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಾಲಯದ ಪರಿಸರದಲ್ಲಿ ಚಪ್ಪರಗಳ ನಿರ್ಮಾಣ, ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಗಳಿಗೆ ವೇದಿಕೆ ಮತ್ತು ಕಾರ್ಯಾಲಯಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ವಾಹನ ಪಾರ್ಕಿಂಗ್ ಸೌಲಭ್ಯಕ್ಕೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.
ತಂಜಾವೂರು ಶೈಲಿಯ ಗೋಪುರಕ್ಕೆ ಅಂತಿಮ ಸ್ಪರ್ಶ
ದೇವಸ್ಥಾನದ ಪ್ರಮುಖ ಆಕರ್ಷಣೆಯಾದ ತಂಜಾವೂರು ಶೈಲಿಯ ಕಗ್ಗಲ್ಲಿನ ಗೋಪುರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ಗೋಪುರವನ್ನು ಮಧೂರು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮತ್ತು ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಅವರು ಸುಮಾರು 1.11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಖ್ಯಾತ ಶಿಲ್ಪಿ ಮೂಡುಬಿದಿರೆಯ ರಮೇಶ್ ಅವರು ಈ ಗೋಪುರದ ಕೆಲಸವನ್ನು ನಿರ್ವಹಿಸಿದ್ದಾರೆ. ಅವರು ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜಾಂಗಣ ಮತ್ತು 24 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಸುತ್ತ ಇಂಟರ್ಲಾಕ್ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ.
ಮೂಡಪ್ಪ ಸೇವೆಗೆ 400ಕ್ಕೂ ಹೆಚ್ಚು ಬುಟ್ಟಿ ಸಮರ್ಪಣೆ
ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಅಂಗವಾಗಿ, ಸುಮಾರು 400ಕ್ಕೂ ಹೆಚ್ಚು ಬುಟ್ಟಿಗಳನ್ನು ದೇವಸ್ಥಾನಕ್ಕೆ ಸಮರ್ಪಿಸಲಾಗಿದೆ. ಈ ಬುಟ್ಟಿಗಳನ್ನು ದಂಬೆಮೂಲೆ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶ್ರೀ ಮಧೂರು ಸನ್ನಿಧಿಗೆ ತರಲಾಯಿತು. ಅನೇಕ ದಾನಿಗಳ ಸಹಕಾರದಿಂದ ಕಾರ್ಯಾಡು ಬಟ್ಯ ಮತ್ತು ಬಳಗದ ಸದಸ್ಯರು ಬುಟ್ಟಿಗಳನ್ನು ಹೆಣೆದು ನೀಡಿದ್ದಾರೆ. ದೇವಾಲಯದ ಪ್ರಧಾನ ಅರ್ಚಕ ವಿ.ಶ್ರೀಕೃಷ್ಣ ಉಪಾಧ್ಯಾಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರತಿ ಬುಟ್ಟಿಗೆ ಸುಮಾರು 300 ರೂಪಾಯಿ ನೀಡಲಾಗಿದೆ.
