
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ರಾಮ್‌ಬನ್ ಜಿಲ್ಲೆಯಲ್ಲಿ ಭಾನುವಾರ ಸೇನೆಗೆ ಸೇರಿದ ವಾಹನವೊಂದು ಸುಮಾರು 700 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು, ಮೂವರು ಯೋಧರು ಸಾವಿಗೀಡಾಗಿದ್ದಾರೆ.
ದುರಂತದಲ್ಲಿ ಅಮಿತ್ ಕುಮಾರ್, ಸುಜಿತ್ ಕುಮಾರ್ ಮತ್ತು ಮನ್ ಬಹದ್ದೂರ್ ಎಂಬ ಯೋಧರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನಿಂದ ಶ್ರೀನಗರದತ್ತ ಸಾಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬೆಳಿಗ್ಗೆ 10:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಘಟನೆಯ ಮಾಹಿತಿ ಲಭ್ಯವಾದ ತಕ್ಷಣವೇ ಸೇನೆ, ಪೊಲೀಸರು, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯರು ಸೇರಿ ರಕ್ಷಣಾ ಕಾರ್ಯಚರಣೆ ನಡೆಸಿದರು. ಆದರೆ ಮೂವರು ಯೋಧರನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ದುರ್ಘಟನೆ ಯೋಧರ ಕುಟುಂಬಗಳಿಗೆ ಆಘಾತ ತಂದಿದ್ದು, ಸೇನಾಮಟ್ಟದಲ್ಲೂ ವಿಷಾದ ವ್ಯಕ್ತವಾಗಿದೆ.