
ಮುಂಬಯಿ : ಭಾರತೀಯ ಚಿತ್ರರಂಗದ ಮೋಡಿಗಾರ, ಭಾವಪೂರ್ಣ ಧ್ವನಿಯ ಮೂಲಕ ಕೋಟ್ಯಂತರ ಹೃದಯ ಗೆದ್ದಿರುವ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ಸಿನಿಮಾ ಹಿನ್ನೆಲೆ ಗಾಯನಕ್ಕೆ (Playback Singing) ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿರುವ ಅವರು, ಸುದೀರ್ಘ ಕಾಲದ ಗಾಯನದ ಪಯಣಕ್ಕೆ ವಿರಾಮ ಹಾಡುತ್ತಿರುವುದಾಗಿ ತಿಳಿಸಿದ್ದಾರೆ.
ಸಿನಿಮಾ ಹಾಡುಗಳಿಂದ ದೂರ ಸರಿದರೂ ಸಂಗೀತದೊಂದಿಗಿನ ಸಂಬಂಧವನ್ನು ಅವರು ಕಡಿದುಕೊಳ್ಳುತ್ತಿಲ್ಲ. ಇನ್ನು ಮುಂದೆ ಸ್ವತಂತ್ರವಾಗಿ ಸಂಗೀತ ಸಂಯೋಜನೆ (Independent Music) ಮತ್ತು ಗೀತರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಅರಿಜಿತ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಹಾಗೂ ರೆಕಾರ್ಡಿಂಗ್ ಹಂತದಲ್ಲಿರುವ ಕೆಲವು ಚಿತ್ರಗೀತೆಗಳು ಮಾತ್ರ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ. ತಮ್ಮ ಅಸಾಧಾರಣ ಪ್ರತಿಭೆಗೆ 2 ರಾಷ್ಟ್ರೀಯ ಪ್ರಶಸ್ತಿ ಹಾಗೂ ಪದ್ಮಶ್ರೀ ಗೌರವವನ್ನು ಮುಡಿಗೇರಿಸಿಕೊಂಡಿರುವ ಅರಿಜಿತ್ ಅವರ ಈ ನಡೆ ಬಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅವರ ನಿವೃತ್ತಿ ನಿರ್ಧಾರದ ಹಿಂದೆ ಚಿತ್ರರಂಗದಲ್ಲಿ ಗಾಯಕರಿಗೆ ಸಿಗಬೇಕಾದ ಸೂಕ್ತ ಗೌರವದ ಕೊರತೆಯೂ ಇರಬಹುದು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



































