
ಮುಂಬೈ: ಪ್ರಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್ ಮತ್ತು ಪ್ರತಿಕ್ರಿಯೆಗಳಿಂದ ಉಂಟಾದ ವಿವಾದಕ್ಕೆ ಕ್ಷಮೆ ಕೇಳಿರುವುದಾಗಿ ಘೋಷಿಸಿದ್ದಾರೆ. ‘ಫುಲೆ’ ಚಿತ್ರದ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ (CBFC) ವಿಳಂಬ ಮಾಡಿದ್ದು, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಅನುರಾಗ್ ಕಶ್ಯಪ್ ಅವರು ಭಾವೋದ್ವೇಗದಲ್ಲಿ ಮಾಡಿರುವ ಪೋಸ್ಟ್ ಇದೀಗ ಬಿಕ್ಕಟ್ಟಿಗೆ ಕಾರಣವಾಗಿದೆ.
ಅವರ ಪೋಸ್ಟ್‌ಡಲ್ಲಿ ಒಬ್ಬ ಬಳಕೆದಾರನು ಮಾಡಿದ ಕಾಮೆಂಟ್‌ಗೆ ಪ್ರತಿಕ್ರಿಯೆಯಾಗಿ, “ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೀನಿ” ಎಂಬಂತಹ ತೀವ್ರವಾದ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಬ್ರಾಹ್ಮಣ ಸಮುದಾಯದ ಸದಸ್ಯರಿಂದ ಭಾರೀ ಆಕ್ರೋಶದ ಅಲೆ ಎದ್ದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುರಾಗ್, ಇದೀಗ ತಮ್ಮ ಹಿಂದಿನ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. “ನಾನು ಹೇಳಿದ ಮಾತುಗಳನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ, ಅದನ್ನು ನಾನು ಪಡೆಯುವುದೂ ಇಲ್ಲ. ಆದರೆ, ನನ್ನ ಹೇಳಿಕೆಯನ್ನು ಹೊರತುಪಡಿಸಿ, ನನ್ನ ಹೆಂಡತಿ, ಮಗಳು, ಗೆಳೆಯರ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆಗಳು ಬರುತ್ತಿರುವುದು ಮಾನವೀಯತೆ ವಿರೋಧಿ” ಎಂದು ಹೇಳಿದ್ದಾರೆ.
ಅವರು ತಮ್ಮ ಕ್ಷಮಾಪಣೆ ಹೇಳಿಕೆಯಲ್ಲಿ, “ನನ್ನನ್ನು ಟೀಕಿಸಿ, ಬೈಯಿರಿ. ಆದರೆ ನನ್ನ ಕುಟುಂಬವನ್ನು ಗುರಿಯಾಗಿಸಬೇಡಿ. ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರನ್ನೇ ಗುರಿ ಮಾಡುವ ಪ್ರವೃತ್ತಿ ನಿಂದನೀಯ” ಎಂದು ತಿಳಿಸಿದರು.
ಈ ನಡುವೆ ‘ಫುಲೆ’ ಚಿತ್ರಕ್ಕೆ ಸಂಬಂಧಿಸಿದ ಸೆನ್ಸಾರ್ ಮಂಡಳಿಯ ತೀರ್ಮಾನಕ್ಕೂ ಬ್ರಾಹ್ಮಣ ಸಂಘಟನೆಗಳ ವಿರೋಧಕ್ಕೂ ಸಂಬಂಧವಿರುವುದಾಗಿ ವರದಿಯಾಗಿದೆ. ಆ ಆರೋಪದ ಮೇರೆಗೆ ಅನುರಾಗ್ ಕಶ್ಯಪ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.