
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ವಿಡಿಯೋ ಚಿತ್ರೀಕರಣದ ವಿಚಾರದಲ್ಲಿ ನಡೆದ ವಾಗ್ವಾದವು ಹಲ್ಲೆ ಪ್ರಕರಣವಾಗಿ ಪರಿವರ್ತನೆಯಾಗಿದ್ದು, ‘ಕುಡ್ಲಾ ರಾಂ ಪೇಜ್’ ಎಂಬ ಯೂಟ್ಯೂಬ್ ಚಾನೆಲ್‌ನ ಯೂಟ್ಯೂಬರ್ ಮತ್ತು ಇಬ್ಬರು ಸಹಚರರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರು ಉಜಿರೆಯ ನಿವಾಸಿ ಹರೀಶ್ ನಾಯ್ಕ (46) ಎಂದು ಗುರುತಿಸಲಾಗಿದೆ.
ಆಗಸ್ಟ್ 6 ರಂದು ದಾಖಲಾದ ದೂರಿನ ಪ್ರಕಾರ, ಬುಧವಾರ ಮಧ್ಯಾಹ್ನ ಹರೀಶ್ ನಾಯ್ಕ ಅವರು ಪಾಂಗಾಳ ರಸ್ತೆಯಲ್ಲಿ ಹೋಗುತ್ತಿದ್ದಾಗ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಮೂವರು ಅವರನ್ನು ತಡೆದು ನಿಲ್ಲಿಸಿದ್ದಾರೆ. ‘ರಾಂ ಪೇಜ್’ ಯೂಟ್ಯೂಬರ್ ಎಂದು ಹೇಳಿಕೊಂಡ ವ್ಯಕ್ತಿ, “ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿರುವ ಬಗ್ಗೆ” ಮಾಹಿತಿ ಕೇಳಿ ವಾಗ್ವಾದ ಆರಂಭಿಸಿದ್ದಾರೆ. ಹರೀಶ್ ನಾಯ್ಕ ಇದಕ್ಕೆ ತಕರಾರು ವ್ಯಕ್ತಪಡಿಸಿದಾಗ, ಯೂಟ್ಯೂಬರ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹರೀಶ್ ನಾಯ್ಕ ನೀಡಿದ ದೂರಿನ ಅನ್ವಯ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಲಂ 126(2), 115(2), 352 ಹಾಗೂ 3(5) ಅಡಿಯಲ್ಲಿ ಅಪರಾಧ ಕ್ರಮಾಂಕ 50/2025ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಇದೇ ದಿನ ಈ ಯೂಟ್ಯೂಬರ್‌ಗಳ ಗುಂಪೊಂದು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.