
ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆಯುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಕೋರ್ಟ್ ಹಾಲ್‌ಗೆ ನುಗ್ಗಿ, ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ. ಇದರಿಂದಾಗಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನ್ಯಾಯಾಲಯದಲ್ಲಿ ಗೊಂದಲ
ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸುವಂತೆ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಮತ್ತು ಅವರಿಗೆ ಜೈಲಿನಲ್ಲಿ ಕೆಲವು ಸೌಲಭ್ಯಗಳನ್ನು ನೀಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ಬುಧವಾರ 64ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ, ನ್ಯಾಯಾಲಯದೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಜೋರಾಗಿ ಹೇಳಿದ್ದಾನೆ.
ವ್ಯಕ್ತಿಯ ಪರಿಚಯ ಮತ್ತು ನ್ಯಾಯಾಧೀಶರ ಸೂಚನೆ
ಅಪರಿಚಿತ ವ್ಯಕ್ತಿಯ ವರ್ತನೆಗೆ ನ್ಯಾಯಾಧೀಶರು ಆಶ್ಚರ್ಯಗೊಂಡು, “ನೀವು ಯಾರು?” ಎಂದು ಪ್ರಶ್ನಿಸಿದ್ದಾರೆ. ಆಗ ವ್ಯಕ್ತಿ, ತಾನು ಪತ್ರಕರ್ತ ರವಿ ಬೆಳಗೆರೆ ಅವರ ಕಡೆಯವರು ಎಂದು ಉತ್ತರಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಯಾವುದೇ ಅರ್ಜಿ ಇದ್ದರೂ ಅದನ್ನು ಕಾನೂನುಬದ್ಧವಾಗಿ ಸರ್ಕಾರದ ಮೂಲಕ ಸಲ್ಲಿಸಬೇಕು. ಅದನ್ನು ಇಲ್ಲಿ ನೇರವಾಗಿ ಹೇಳಲು ಬರುವುದಿಲ್ಲ” ಎಂದು ಸೂಚಿಸಿ, ಆತನನ್ನು ನ್ಯಾಯಾಲಯದಿಂದ ಹೊರ ಕಳುಹಿಸಿದ್ದಾರೆ.
ನ್ಯಾಯಾಲಯದ ಭದ್ರತೆಯನ್ನು ಮೀರಿ ವ್ಯಕ್ತಿಯೊಬ್ಬ ಒಳನುಗ್ಗಿದ ಈ ಘಟನೆ, ಆತಂಕಕ್ಕೆ ಕಾರಣವಾಯಿತು. ಬಳಿಕ ಭದ್ರತೆಯನ್ನು ಹೆಚ್ಚಿಸಲಾಯಿತು.
ಅರ್ಜಿ ತೀರ್ಪು ಕಾಯ್ದಿರಿಸಿದೆ
ದರ್ಶನ್ ಅವರನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ ಅರ್ಜಿ ಮತ್ತು ದರ್ಶನ್ ಪರ ವಕೀಲರು ಆ ವರ್ಗಾವಣೆಯನ್ನು ತಡೆಹಿಡಿಯುವಂತೆ ಸಲ್ಲಿಸಿದ ಅರ್ಜಿಗಳ ವಿಚಾರಣೆ ಮುಕ್ತಾಯಗೊಂಡಿದೆ. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ತನ್ನ ತೀರ್ಪನ್ನು ಸೆಪ್ಟೆಂಬರ್ 9 ಕ್ಕೆ ಕಾಯ್ದಿರಿಸಿದೆ.