
ಹಿರಿಯಡ್ಕ: ಕ್ರೀಡೆ ಮತ್ತು ಶಿಸ್ತಿನ ಮಹತ್ವವನ್ನು ಸಾರುವ ಭವ್ಯ ಕಾರ್ಯಕ್ರಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆ.ಪಿ.ಎಸ್.), ಹಿರಿಯಡ್ಕದ ಆವರಣ ಸಾಕ್ಷಿಯಾಯಿತು. ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವು ನವೋತ್ಸಾಹದಿಂದ ಜರುಗಿತು. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಹಿರಿಯಡ್ಕ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀ ವಿಟ್ಠಲ್ ಮಲ್ವಾಡ್ಕರ್ ಅವರು, “ಉತ್ತಮ ಆರೋಗ್ಯ, ಶಿಸ್ತು, ಸಮಯಪ್ರಜ್ಞೆ ಮತ್ತು ಸಂಯಮದಂತಹ ಮೌಲ್ಯಗಳನ್ನು ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಪೋಷಿಸುತ್ತದೆ” ಎಂದು ನುಡಿದರು. ಕ್ರೀಡಾ ಚಟುವಟಿಕೆಗಳು ಕೇವಲ ದೈಹಿಕ ಸಾಮರ್ಥ್ಯಕ್ಕೆ ಸೀಮಿತವಾಗದೆ, ಸಾಮರಸ್ಯ ಮತ್ತು ಗೌರವಾನ್ವಿತ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ನೆರವಾಗುತ್ತದೆ ಎಂದು ಅವರು ತಿಳಿಸಿದರು.
ಖ್ಯಾತ ಉದ್ಯಮಿ ಶ್ರೀ ಸುಂದರ ಕಾಂಚನ್ (ಓಂತಿಬೆಟ್ಟು) ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಹಳೆ ವಿದ್ಯಾರ್ಥಿ ಸಂಘದ (ರಿ) ಕಾರ್ಯದರ್ಶಿ ಶ್ರೀ ಶರತ್ ಚಂದ್ರ ಅವರು ಜ್ಯೋತಿ ಬೆಳಗಿಸಿ, ಕ್ರೀಡಾ ಸ್ಪೂರ್ತಿಯನ್ನು ಉದ್ದೀಪನಗೊಳಿಸಿದರು.
ಅಮೃತ ಮಹೋತ್ಸವದ ಹೆಮ್ಮೆಯ ಸನ್ನಿವೇಶ
ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಅವರು, ಅಮೃತ ಮಹೋತ್ಸವದ ಸನಿಹದಲ್ಲಿರುವ ಸಂಸ್ಥೆಯ ಘನತೆ ಮತ್ತು ಗೌರವಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸಕ್ರಿಯವಾಗಿ ಮತ್ತು ಕ್ರೀಡಾ ಸ್ಪೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ. ಎಲ್. ವಿಶ್ವಾಸ್, ಸದಸ್ಯರಾದ ಶ್ರೀ ಅಶೋಕ್ ಜೋಗಿ, ಶ್ರೀ ನಿತ್ಯಾನಂದ ನಾಯಕ, ಶ್ರೀಮತಿ ಜ್ಯೋತಿ ಪ್ರಭು, ಶ್ರೀಮತಿ ನಿಶಿತಾ ಶೆಟ್ಟಿ, ಶ್ರೀ ವಿಜೇತ್ ಕುಮಾರ್ ಮತ್ತು ಶ್ರೀ ದೇವರಾಜ್ ಶಾಸ್ತ್ರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇವರೊಂದಿಗೆ ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯ ಪ್ರಕಾಶ್ ಶೆಟ್ಟಿ, ಕೆಪಿಎಸ್‌ನ ಉಪ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಪ್ರಭು, ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ರೇವತಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಮಹಮ್ಮದ್ ರಫಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಚೇತನ್ ಕುಮಾರ್ ಶೆಟ್ಟಿ (ಪಟ್ಲ ಯು ಎಸ್ ನಾಯಕ್ ಪ್ರೌಢಶಾಲೆ) ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ತಂದಿತು.
ಹಿರಿಯ ಉಪನ್ಯಾಸಕಿ ಶ್ರೀಮತಿ ವೀಣಾ ಡಿ ನಾಯಕ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿದ್ಯಾ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ದೇವದಾಸ್ ಪ್ರಭು ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸಾಧನೆಗೆ ಶಿಸ್ತಿನ ಬುನಾದಿ: ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀ ಬಾಬು ಶೆಟ್ಟಿ
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭಕ್ಕೆ ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ರಾಷ್ಟ್ರೀಯ ಪುರಸ್ಕೃತರಾದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಶ್ರೀ ಬಾಬು ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು. ಸಮಾರೋಪ ಭಾಷಣದಲ್ಲಿ ಅವರು ವಿದ್ಯಾರ್ಥಿಗಳಿಗೆ ಉತ್ತಮ ಸಲಹೆ ನೀಡಿದರು. “ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡುವ ಜೊತೆಗೆ ಉತ್ತಮ ಶಿಸ್ತಿನ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ 30 ನಿಮಿಷಗಳಷ್ಟು ಸಮಯವನ್ನು ಆಟದ ಮೈದಾನದಲ್ಲಿ ಕಳೆದರೆ ಉತ್ತಮ ಆಟಗಾರರಾಗಲು ಸಾಧ್ಯವಿದೆ” ಎಂದು ಯುವ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀ ಬಾಬು ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ (ರಿ) ಅಧ್ಯಕ್ಷರಾದ ಶ್ರೀ ಶ್ರೀನಿವಾಸರಾವ್ ಹಿರಿಯಡ್ಕ, ಪದವಿ ಪೂರ್ವ ವಿಭಾಗದ ಅನ್ನಪ್ರಸಾದ ಭೋಜನ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಜೋಗಿ, ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಹಾಗೂ ಉಪ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಪ್ರಭು ಸೇರಿದಂತೆ ಹಲವು ಗಣ್ಯರು ಸಮಾರೋಪದಲ್ಲಿ ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕರಾದ ಶ್ರೀ ವಿಜಯ್ ಕುಮಾರ್ ಸ್ವಾಗತಿಸಿದರು, ಹಿಂದಿ ಅಧ್ಯಾಪಕರಾದ ಶ್ರೀ ರವೀಂದ್ರ ಪ್ರಭು ಕಾರ್ಯಕ್ರಮ ನಿರ್ವಹಿಸಿದರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅಬ್ದುಲ್ ಜಲೀಲ್ ವಂದನಾರ್ಪಣೆ ಮಾಡಿದರು. ಕ್ರೀಡಾಕೂಟವು ಯಶಸ್ವಿಯಾಗಿ ಮುಕ್ತಾಯಗೊಂಡಿತು.



































