
ಬೆಂಗಳೂರು : ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿಯಾಗಿ ಕನ್ನಡಿಗರ ಮನೆ ಮಾತಾಗಿದ್ದ ಆ್ಯಂಕರ್ ಅನುಶ್ರೀ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗು ಮೂಲದ ರೋಷನ್ ಅವರೊಂದಿಗೆ ಅನುಶ್ರೀ ಅವರು ಇಂದು ಅದ್ಧೂರಿಯಾಗಿ ಹಸೆಮಣೆ ಏರಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಅದ್ಧೂರಿ ಮದುವೆ ಸಂಭ್ರಮ
ಬೆಂಗಳೂರಿನ ಹೊರವಲಯದ ಕಗ್ಗಲಿಪುರದ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ನಡೆದಿದೆ. ಇಂದು ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆಯಾಗಿದ್ದು, ಇವರ ಮದುವೆ ಸಮಾರಂಭದಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗಿಯಾಗಿ ನವ ದಂಪತಿಗೆ ಶುಭ ಹಾರೈಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಳದಿ ಶಾಸ್ತ್ರದ ಫೋಟೋಗಳು ಮತ್ತು ಮದುವೆಯ ವಿಡಿಯೋಗಳು ವೈರಲ್ ಆಗುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಅನುಶ್ರೀ ಅವರ ಮದುವೆ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು. ಆದರೆ, ಈ ಬಗ್ಗೆ ಎಲ್ಲರಿಗೂ ಸ್ಪಷ್ಟತೆ ಸಿಕ್ಕಿದ್ದು, ಅಂತಿಮವಾಗಿ 37ನೇ ವಯಸ್ಸಿನಲ್ಲಿ ಅನುಶ್ರೀ ಅವರು ತಮ್ಮ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ.