
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಅಧಿಕಾರಿಗಳಲ್ಲಿ ಓರ್ವರಾದ ಅನಂತಕೃಷ್ಣ ಪ್ರಸಾದ್ (45) ಅವರು ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಮೂಲದವರಾಗಿದ್ದ ಇವರು, ಮಠದಲ್ಲಿ ಕೋಟಿ ಗೀತಾ ಲೇಖನಯಜ್ಞದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಮೃತರು ತಂದೆ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ರಥಬೀದಿಯಲ್ಲಿ ಸಂಭವಿಸಿದ ದುರಂತ
ಅನಂತಕೃಷ್ಣ ಪ್ರಸಾದ್ ಅವರು ನಿತ್ಯವೂ ಸಂಜೆ ಶ್ರೀಕೃಷ್ಣನ ದರ್ಶನ ಪಡೆದ ನಂತರ ರಥಬೀದಿಯ ಮೂಲಕ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದು ಹಿಂದಿರುಗುತ್ತಿದ್ದರು.
ಅದೇ ಸಂದರ್ಭದಲ್ಲಿ, ಅವರು ರಥಬೀದಿಯಲ್ಲಿ ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಇದನ್ನು ಗಮನಿಸಿದ ರಾಘವೇಂದ್ರ ಮಠದ ಜಯತೀರ್ಥ ಆಚಾರ್ಯರು ತಕ್ಷಣ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಒಳಕಾಡು ಅವರು ಅನಂತಕೃಷ್ಣರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನ ಹೊಂದಿದ್ದಾರೆ.



































