
ಉಡುಪಿ: ಹೆಬ್ರಿ ತಾಲೂಕಿನ ಮುದ್ರಾಡಿ ಕೆಳಪೇಟೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕ್ರೇನ್ ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಎಸ್.ಎನ್.ಸಿ ಗುತ್ತಿಗೆ ಸಂಸ್ಥೆಗೆ ಸೇರಿದ ಕ್ರೇನ್‌ನಿಂದ ಈ ಅಪಘಾತ ಸಂಭವಿಸಿದೆ. ಮೃತರನ್ನು ಸ್ಥಳೀಯ ನಿವಾಸಿ ಚಣಿಲ (65) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕ್ರೇನ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ.
ದುರ್ಘಟನೆ ನಡೆದ ನಂತರ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಸ್ಥಳದಲ್ಲಿದ್ದ ಸಾರ್ವಜನಿಕರು ಆತನನ್ನು ಬೆನ್ನಟ್ಟಿ ಸ್ವಲ್ಪ ದೂರದಲ್ಲಿ ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕ್ರೇನ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.