
ಉಡುಪಿ : ಮುಂಗಾರು ಪ್ರವೇಶಕ್ಕೆ ದಿನಗಣನೆ ಶುರುವಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ಪೂರ್ವಸಿದ್ಧತೆ ಸಾಕಷ್ಟು ಹಿನ್ನಡೆಯಲ್ಲಿದ್ದು, ಜನತೆ ಆತಂಕದಲ್ಲಿದ್ದಾರೆ. ವಿಭಿನ್ನ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಮುಂಗಾರು ಸಮಯದಲ್ಲಿ ತೀವ್ರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇತ್ತೀಚೆಗೆ ಜಿಲ್ಲೆಗೆ ನೀಡಿದ ಭೇಟಿಯಲ್ಲಿ ಈ ಕುರಿತು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರೂ, ಬಹುತೇಕ ಸ್ಥಳಗಳಲ್ಲಿ ಮಳೆ ನೀರಿನ ತೋಡು, ಚರಂಡಿಗಳ ಸ್ವಚ್ಛತೆ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.
ಮೇ 27ರ ನಂತರ ಕರಾವಳಿಗೆ ಮುಂಗಾರು ಪ್ರವೇಶಿಸಲಿದೆ ಎಂಬ ಮುನ್ಸೂಚನೆಯಿದೆ. ಈಗಲೇ ವಾಯುಭಾರ ಕುಸಿತದಿಂದಾಗಿ ಎರಡು ದಿನಗಳಲ್ಲಿ ಭಾರೀ ಮಳೆ ಸುರಿದಿದ್ದು, ಹಲವೆಡೆ ಅನಾಹುತಗಳೂ ಸಂಭವಿಸಿವೆ.
ಸಮರ್ಪಕ ತಯಾರಿ ಅಗತ್ಯ
ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳು, ನೀರಾವರಿ, ಅರಣ್ಯ ಇಲಾಖೆ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳಿಂದ ತೋಡು, ಸೇತುವೆ ಕೆಳಭಾಗ, ಚರಂಡಿ ಹಾಗೂ ತಗ್ಗುಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕಿದೆ.
ಅಪಾಯಕಾರಿ ಮರ, ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ಪತ್ತೆ ಮತ್ತು ದುರಸ್ತಿಯೂ ಅವಶ್ಯಕ. ಆದರೆ ಈ ಎಲ್ಲ ಕ್ಷೇತ್ರಗಳಲ್ಲಿ ಸ್ಪಷ್ಟ ಪ್ರಗತಿ ಇಲ್ಲ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೂ ಆರೋಗ್ಯ ಇಲಾಖೆಯ ಕ್ರಮ ನಿರೀಕ್ಷಿತ ಮಟ್ಟ ತಲುಪಿಲ್ಲ.
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ:
“ಎರಡು ದಿನ ಮಳೆಯಿಂದಾದ ಹಾನಿಯ ಮಾಹಿತಿಯನ್ನು ವಿವಿಧ ಇಲಾಖೆಗಳಿಂದ ಪಡೆಯಲಾಗಿದೆ . ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಮಳೆಗಾಲದ ಪೂರ್ವಸಿದ್ಧತೆ ಚುರುಕಾಗಿ ಪೂರ್ಣಗೊಳ್ಳಬೇಕು. ಮುಖ್ಯವಾಗಿ ಮಳೆ ನೀರಿನ ತೋಡುಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ,” ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.
ಮಳೆಗಾಲದ ಮೊದಲ ದಿಕ್ಕಿನಲ್ಲಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಿರಂತರ ಮಳೆ ಸಂದರ್ಭದಲ್ಲಿ ಉಂಟಾಗುವ ಹಾನಿಯನ್ನು ತಡೆಯುವುದು ಕಷ್ಟಸಾಧ್ಯ.