
ಹೈದರಾಬಾದ್: ಟಾಲಿವುಡ್‌ನ ಪ್ರತಿಷ್ಠಿತ ಅಲ್ಲು ಕುಟುಂಬದಲ್ಲಿ ಈಗ ಮದುವೆಯ ಸಡಗರವೋ ಸಡಗರ. ಇತ್ತೀಚೆಗಷ್ಟೇ ನಟ ಅಲ್ಲು ಸಿರೀಶ್ ಹಾಗೂ ನಯನಿಕಾ ರೆಡ್ಡಿ ಅವರ ವಿವಾಹ ಮಹೋತ್ಸವ ಅತ್ಯಂತ ವೈಭವಯುತವಾಗಿ ನೆರವೇರಿದೆ. ಚಿತ್ರರಂಗದ ದಿಗ್ಗಜರು ಹಾಗೂ ಆಪ್ತೇಷ್ಟರ ಸಮ್ಮುಖದಲ್ಲಿ ನಡೆದ ಈ ಸಮಾರಂಭವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಿಶೇಷವೆಂದರೆ, ಸಹೋದರನ ಮದುವೆಯ ದಿನವೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ದಂಪತಿಯ 15ನೇ ವಿವಾಹ ವಾರ್ಷಿಕೋತ್ಸವವೂ ಇತ್ತು. 2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಈಗ 15 ವರ್ಷಗಳ ಯಶಸ್ವಿ ಪ್ರಯಾಣವನ್ನು ಪೂರೈಸಿದೆ. ಈ ಸ್ಮರಣೀಯ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಲು ಅಲ್ಲು ಅರ್ಜುನ್ ತಮ್ಮ ಪ್ರಿಯತಮೆ ಸ್ನೇಹಾಗೆ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ.
ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮರ್ಸಿಡಿಸ್-ಎಎಂಜಿ (Mercedes-AMG) ಕಾರನ್ನು ಪತ್ನಿಗೆ ಉಡುಗೊರೆಯಾಗಿ ನೀಡುವ ಮೂಲಕ ಅರ್ಜುನ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ದುಬಾರಿ ಕಾರಿನ ಫೋಟೋಗಳು ಹಾಗೂ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಈ ದಂಪತಿಗೆ ಆಯಾನ್ ಮತ್ತು ಅರ್ಹಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ, ಅಲ್ಲು ಅರ್ಜುನ್ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಿರ್ದೇಶಕ ಅಟ್ಲಿ ಅವರ ಜೊತೆ ಹೊಸ ಪ್ರಾಜೆಕ್ಟ್ ಆರಂಭಿಸಿರುವ ಅವರು, ಲೋಕೇಶ್ ಕನಕರಾಜ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.



































