
ಕಾರ್ಕಳ: ತಾಲೂಕಿನ ಇರ್ವತ್ತೂರು ಗ್ರಾಮದಲ್ಲಿ ಮದ್ಯವ್ಯಸನಕ್ಕೆ ಬಿದ್ದಿದ್ದ ವ್ಯಕ್ತಿಯೊಬ್ಬರು ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಇರ್ವತ್ತೂರಿನ ನಿವಾಸಿ ಮಹೇಶ್ ಶೆಟ್ಟಿ (37 ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮಹೇಶ್ ಶೆಟ್ಟಿ ಅವರ ತೀವ್ರ ಕುಡಿತದ ಚಟದಿಂದ ಬೇಸತ್ತಿದ್ದ ಅವರ ಪತ್ನಿ ಸುಮಾರು 3 ವರ್ಷಗಳ ಹಿಂದೆ ಅವರಿಗೆ ವಿಚ್ಛೇದನ ನೀಡಿ ದೂರವಾಗಿದ್ದರು. ಪತ್ನಿ ಬಿಟ್ಟು ಹೋದ ಕಾರಣ ತೀವ್ರ ಬೇಸರಗೊಂಡಿದ್ದ ಮಹೇಶ್ ಶೆಟ್ಟಿ ಅವರು ಸರಿಯಾಗಿ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು. ಇದೇ ಕಾರಣಕ್ಕೆ ತೀವ್ರವಾಗಿ ಮನನೊಂದಿದ್ದ ಅವರು ಅಕ್ಟೋಬರ್ 29ರ ರಾತ್ರಿ ಮನೆಯ ಸಮೀಪದ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದಾರುಣ ಘಟನೆಯ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































