
ಬೆಂಗಳೂರು : ಕಳೆದ ಕೆಲವು ತಿಂಗಳುಗಳಿಂದ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿರುವ ಬೆಂಗಳೂರಿನ ಆಹಾರ ಮತ್ತು ಆರೋಗ್ಯ ಇಲಾಖೆಯು, ರಕ್ತನಿಧಿ ಘಟಕಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪರಿಶೀಲಿಸುತ್ತಿದೆ. ರಕ್ತನಿಧಿ ಘಟಕಗಳಿಗೆ ಅಪಾಯಕಾರಿ ಎಚ್‌ಐವಿ ಸೋಂಕಿತ ರಕ್ತ ಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ತಪಾಸಣೆಗಳನ್ನು ಕೈಗೊಳ್ಳಲಾಗಿದೆ.
ಇತ್ತೀಚೆಗೆ, ರಕ್ತ ನಿಧಿ ಘಟಕಗಳಲ್ಲಿ ಸ್ವಚ್ಛತೆಯ ಕೊರತೆ, ರಕ್ತ ಸಂಗ್ರಹ ಘಟಕದಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಅವ್ಯವಹಾರಗಳ ಕುರಿತು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರಕ್ತ ಸಂಗ್ರಹ ಘಟಕಗಳ ತಪಾಸಣೆಯನ್ನು ತೀವ್ರಗೊಳಿಸಿದೆ.
ಆಘಾತಕಾರಿ ಅಂಶಗಳ ಬಹಿರಂಗ:
ರಾಜ್ಯದಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಿದ್ದರೂ, 2024-25ರಲ್ಲಿ ರಾಜ್ಯದ 230 ಕೇಂದ್ರಗಳಿಂದ ಲಕ್ಷಾಂತರ ಯುನಿಟ್ ರಕ್ತ ಸಂಗ್ರಹವಾಗಿದೆ. ಆದರೆ, ಸಂಗ್ರಹವಾದ ರಕ್ತದ ಮಾದರಿಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. 44,776 ಯುನಿಟ್ ರಕ್ತದ ಮಾದರಿಗಳನ್ನು ಪರೀಕ್ಷಿಸಿದಾಗ, ಕೆಲವು ಮಾದರಿಗಳಲ್ಲಿ ಎಚ್‌ಐವಿ, ಹೆಪಟೈಟಿಸ್-ಬಿ, ಹೆಪಟೈಟಿಸ್-ಸಿ, ಸಿಫಿಲಿಸ್ ಮತ್ತು ಮಲೇರಿಯಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇದರಿಂದಾಗಿ, ಈ ವರ್ಷ ಸಂಗ್ರಹಿತವಾದ 44,776 ಯುನಿಟ್ ರಕ್ತ ವ್ಯರ್ಥವಾಗಿದೆ. ಈ ವರ್ಷದ ಒಟ್ಟಾರೆ ರಕ್ತದಾನದಲ್ಲಿ, ಮೊದಲ ಆರು ತಿಂಗಳಲ್ಲಿ ದಾನವಾಗಿ ಬಂದ ಶೇಕಡಾ 12.5ರಷ್ಟು ರಕ್ತದಲ್ಲಿ ಸೋಂಕುಗಳು ಹೆಚ್ಚಾಗಿ ಪತ್ತೆಯಾಗಿರುವುದು ಕಳವಳಕಾರಿಯಾಗಿದೆ.
ಸೋಂಕಿತ ರಕ್ತ ಬ್ಲಡ್ ಬ್ಯಾಂಕ್ ಸೇರಲು ಕಾರಣವೇನು?
ರಕ್ತನಿಧಿ ಘಟಕಗಳಲ್ಲಿ ಎಚ್‌ಐವಿ ಸೋಂಕಿತ ರಕ್ತ ಸೇರ್ಪಡೆಗೆ ರಕ್ತದಾನ ಶಿಬಿರಗಳು ಪ್ರಮುಖ ಕಾರಣವಾಗಿವೆ ಎನ್ನಲಾಗಿದೆ. ರಸ್ತೆ ಬದಿಯಲ್ಲಿ, ಮಾರುಕಟ್ಟೆ ಸೇರಿದಂತೆ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದಾನಿಗಳಿಂದ ರಕ್ತ ಪಡೆಯಲಾಗುತ್ತದೆ. ನಂತರ ಇದನ್ನು ರಕ್ತನಿಧಿ ಕೇಂದ್ರಗಳಲ್ಲಿ ತಪಾಸಣೆ ಮಾಡಿದಾಗ, ಎಚ್‌ಐವಿ ಸೇರಿದಂತೆ ಇತರ ಸೋಂಕುಗಳು ಇರುವುದು ಕಂಡುಬರುತ್ತದೆ. ಇಂತಹ ರಕ್ತವನ್ನು ಸಂಗ್ರಹಿಸದೆ ನಿಷ್ಕ್ರಿಯಗೊಳಿಸಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎಚ್‌ಐವಿ, ಹೆಪಟೈಟಿಸ್-ಬಿ, ಹೆಪಟೈಟಿಸ್-ಸಿ, ಸಿಫಿಲಿಸ್ ಮತ್ತು ಮಲೇರಿಯಾ ಪಾಸಿಟಿವ್ ಇರುವವರ ರಕ್ತವು ರಕ್ತನಿಧಿ ಸಂಗ್ರಹ ಘಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ.
ಯಾರು ರಕ್ತದಾನ ಮಾಡಬಹುದು?
- 18 ರಿಂದ 65 ವರ್ಷ ವಯಸ್ಸಿನ, ಕನಿಷ್ಠ 50 ಕೆ.ಜಿ. ತೂಕವಿರುವ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು.
- ಯಾವುದೇ ತೀವ್ರ ರೋಗ ಅಥವಾ ಔಷಧ ಸೇವನೆ ಮಾಡುವವರು ರಕ್ತದಾನ ಮಾಡಬಾರದು.
- ಮದ್ಯ ಸೇವನೆ ಮಾಡಿದವರು ಅಥವಾ ಸೋಂಕು ಹೊಂದಿರುವವರು ರಕ್ತದಾನ ಮಾಡಬಾರದು.
- ಎರಡು ರಕ್ತದಾನದ ಮಧ್ಯೆ ಕನಿಷ್ಠ 3 ತಿಂಗಳ ಅಂತರ ಇರಬೇಕು.
- ಎಚ್‌ಐವಿ, ಕ್ಯಾನ್ಸರ್ ಪೀಡಿತರು ಅಥವಾ ಇತರೆ ಗಂಭೀರ ಖಾಯಿಲೆಯಿಂದ ಬಳಲುವವರು ರಕ್ತದಾನ ಮಾಡಬಾರದು.
- ಕಿಡ್ನಿ ಅಥವಾ ಇತರೆ ಅಂಗಾಂಗ ಸಮಸ್ಯೆಯಿಂದ ಬಳಲುವವರು ರಕ್ತದಾನ ಮಾಡಬಾರದು.
- ಟ್ಯಾಟೂ ಹಾಕಿಸಿಕೊಂಡವರು ಆರು ತಿಂಗಳ ಕಾಲ ರಕ್ತದಾನ ಮಾಡಬಾರದು.
ರಕ್ತದಾನ ಮಾಡುವ ಮುನ್ನ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸುವುದು ಮತ್ತು ದಾನಿಗಳು ತಮ್ಮ ಆರೋಗ್ಯದ ಬಗ್ಗೆ ಪ್ರಾಮಾಣಿಕ ಮಾಹಿತಿ ನೀಡುವುದು ಅತ್ಯಗತ್ಯ.