
ಬೆಂಗಳೂರು: ರಾಜ್ಯದ ಗಮನ ಸೆಳೆದಿದ್ದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಬಾರಿಯೂ ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ ಕೊಲೆ ಆರೋಪ ಎದುರಿಸುತ್ತಿರುವ ಚೇತನ್, ಮನಿಷ್, ಕೇಶವ ಮತ್ತು ಮಂಜುನಾಥ್ ಅವರು ಎರಡನೇ ಬಾರಿಗೆ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿ, ಜಾಮೀನು ನೀಡಲು ನಿರಾಕರಿಸಿದೆ. ಅಷ್ಟೇ ಅಲ್ಲದೆ, ಮುಂದಿನ ನಾಲ್ಕು ತಿಂಗಳೊಳಗೆ ಟ್ರಯಲ್ ಕೋರ್ಟ್‌ನಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದೆ. ಈ ಅವಧಿಯಲ್ಲಿ ಆರೋಪಿಗಳು ಮತ್ತೆ ಯಾವುದೇ ಜಾಮೀನು ಅರ್ಜಿಗಳನ್ನು ಸಲ್ಲಿಸಬಾರದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಆದೇಶದಿಂದ ಆರೋಪಿಗಳಿಗೆ ಸತತ ಎರಡನೇ ಬಾರಿಗೆ ಜಾಮೀನು ಪಡೆಯುವ ಪ್ರಯತ್ನದಲ್ಲಿ ಹಿನ್ನಡೆಯಾಗಿದೆ.