
ಉಡುಪಿ: ಕರಾವಳಿಯ ಪ್ರಸಿದ್ಧ ಎಕೆಎಂಎಸ್ (AKMS) ಸಾರಿಗೆ ಸಂಸ್ಥೆಯ ಮಾಲೀಕ ಹಾಗೂ ಉಡುಪಿಯ ಆತ್ರಾಡಿ ನಿವಾಸಿ ಉದ್ಯಮಿ ಸೈಫುದ್ದೀನ್ ಅವರನ್ನು ಶನಿವಾರ (ಸೆಪ್ಟೆಂಬರ್ 27) ಬೆಳಿಗ್ಗೆ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಈ ಘಟನೆ ಮಲ್ಪೆ-ಕೊಡವೂರು ರಸ್ತೆ ಪ್ರದೇಶದಲ್ಲಿ ನಡೆದಿದೆ. ಕೊಡವೂರಿನಲ್ಲಿ ಸೈಫುದ್ದೀನ್ ಇತ್ತೀಚೆಗೆ ಖರೀದಿಸಿದ್ದ ಹೊಸ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೃತ್ಯ ನಡೆದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಮನೆಯೊಳಗೆ ಅಪಾರ ಪ್ರಮಾಣದ ರಕ್ತ ಹರಿದಿದೆ.
ಈ ಹತ್ಯೆಯಲ್ಲಿ ಸೈಫುದ್ದೀನ್ ಅವರ ಸಹಚರರೇ ಭಾಗಿಯಾಗಿರುವ ಬಗ್ಗೆ ಪ್ರಾಥಮಿಕ ಮಾತುಗಳು ಕೇಳಿಬರುತ್ತಿದ್ದು, ಪೊಲೀಸರು ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ. ಸೈಫುದ್ದೀನ್ ಅವರ ವಿರುದ್ಧ ಕೆಲ ವರ್ಷಗಳ ಹಿಂದೆ ಉಡುಪಿ-ಮಣಿಪಾಲ ರಸ್ತೆಯಲ್ಲಿಯೂ ದಾಳಿ ನಡೆದಿತ್ತು ಎಂದು ತಿಳಿದುಬಂದಿದೆ. ಮಲ್ಪೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



































