
ಮಂಗಳೂರು : ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ (AI) ತಂತ್ರಜ್ಞಾನ ಬಳಸಿ ವಿವಾದಿತ ವೀಡಿಯೋ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಸಮೀರ್ ಅವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಸಮೀರ್ ಮನೆ ಸುತ್ತುವರಿದ ಪೊಲೀಸರು
ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆನಂದ್ ಎನ್. ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವು ಬೆಂಗಳೂರಿಗೆ ತೆರಳಿದೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಅವರ ಬಾಡಿಗೆ ಮನೆಯನ್ನು ಪೊಲೀಸರು ಸುತ್ತುವರೆದಿದ್ದು, ಅವರನ್ನು ಬಂಧಿಸಿ ಧರ್ಮಸ್ಥಳಕ್ಕೆ ಕರೆತರುವ ಸಾಧ್ಯತೆ ಇದೆ.
ಸುಳ್ಳು ಪ್ರಚಾರ ಆರೋಪ ಮತ್ತು ಕಾನೂನು ಕ್ರಮ
ಯೂಟ್ಯೂಬರ್ ಸಮೀರ್ ಎಐ ತಂತ್ರಜ್ಞಾನ ಬಳಸಿ ಪ್ರಕರಣದ ಸಾಕ್ಷಿದಾರರು ನೀಡದ ಸುಳ್ಳು ಮಾಹಿತಿಗಳನ್ನು ಸೇರಿಸಿ, ಕಾಲ್ಪನಿಕ ವೀಡಿಯೋಗಳನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಸಾರ್ವಜನಿಕರಲ್ಲಿ ಅಶಾಂತಿ ಉಂಟುಮಾಡುವ ಮತ್ತು ಪ್ರಕರಣದ ಪ್ರಾಮಾಣಿಕತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ.
ಧರ್ಮಸ್ಥಳ ಪಿಎಸ್‌ಐ ಸಮರ್ಥ್ ನೀಡಿದ ದೂರಿನ ಆಧಾರದ ಮೇಲೆ ಜುಲೈ 12ರಂದು ಸಮೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 192, 240, ಮತ್ತು 353(1)(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.