
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಜೀವಹಾನಿಯು ಹೆಚ್ಚಾಗಲು ತಾಲಿಬಾನ್‌ನ ಕಟ್ಟುನಿಟ್ಟಿನ ನಿಯಮಗಳೇ ಕಾರಣವಾಗಿವೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಸುಮಾರು 2,000ಕ್ಕೂ ಹೆಚ್ಚು ಜನರು ಸಾವಿಗೀಡಾದ ಈ ದುರಂತದಲ್ಲಿ, ಸಹಾಯ ಕಾರ್ಯಕರ್ತರು ಎದುರಿಸಿದ “ಸ್ಪರ್ಶ ನಿರ್ಬಂಧ”ದಿಂದ ನೂರಾರು ಮಹಿಳೆಯರು ಅವಶೇಷಗಳ ಅಡಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರಂತದ ನಂತರ, ರಕ್ಷಣಾ ಕಾರ್ಯಾಚರಣೆಗೆ ಪುರುಷರೇ ಮುಂಚೂಣಿಯಲ್ಲಿದ್ದಾರೆ, ಆದರೆ ಅಲ್ಲಿ ಮಹಿಳಾ ರಕ್ಷಣಾ ಸಿಬ್ಬಂದಿಗಳ ಕೊರತೆಯಿದೆ. ಈ ಪರಿಸ್ಥಿತಿಗೆ ತಾಲಿಬಾನ್ ಜಾರಿಗೆ ತಂದ ಶರಿಯಾ ಕಾನೂನು ಕಾರಣವಾಗಿದೆ. ಈ ನಿಯಮದ ಪ್ರಕಾರ, ಮಹಿಳೆಯರು ತಮ್ಮ ತಂದೆ, ಪತಿ, ಸಹೋದರ ಅಥವಾ ಮಗನಲ್ಲದೆ ಬೇರೆ ಯಾವುದೇ ಪುರುಷನನ್ನು ಸ್ಪರ್ಶಿಸುವುದು ನಿಷಿದ್ಧ.
ಆದರೆ, ಈ ಕಠಿಣ ನಿಯಮದಿಂದಾಗಿ, ಅವಶೇಷಗಳಲ್ಲಿ ಸಿಲುಕಿಕೊಂಡ ಮಹಿಳೆಯರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ. ಸಂಬಂಧವಿಲ್ಲದ ಪುರುಷರು ಸಹಾಯ ಮಾಡಲು ಮುಂದಾದರೂ, ಕಾನೂನಿನ ಭಯದಿಂದ ಅವರನ್ನು ರಕ್ಷಿಸಲು ಪ್ರಯತ್ನಿಸಿಲ್ಲ. ಇದರಿಂದಾಗಿ ಪುರುಷರು ಮತ್ತು ಮಕ್ಕಳನ್ನು ಮಾತ್ರ ರಕ್ಷಿಸಲು ಆದ್ಯತೆ ನೀಡಲಾಗಿದೆ. ಗಾಯಗೊಂಡ ಮಹಿಳೆಯರು ಚಿಕಿತ್ಸೆಗಾಗಿ ಕಾಯುವ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ತಾಲಿಬಾನ್ ಆಡಳಿತದಲ್ಲಿ ಜಾರಿಯಲ್ಲಿರುವ ಈ ಕಟ್ಟುನಿಟ್ಟಿನ ನಿಯಮವು ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಲವು ಸಂಸ್ಥೆಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನಿಯಮಗಳನ್ನು ಸಡಿಲಗೊಳಿಸುವಂತೆ ಒತ್ತಾಯಿಸುತ್ತಿವೆ. ಈ ನಿಯಮವು ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವು ಮತ್ತು ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ಜಟಿಲಗೊಳಿಸಿದೆ.