
ಕೊಚ್ಚಿ : ಮಲಯಾಳಂ ಚಿತ್ರರಂಗದ ನಟಿ ಹಾಗೂ ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್ ಅವರು ಯುವ ರಾಜಕಾರಣಿಯೊಬ್ಬರ ವಿರುದ್ಧ ಗಂಭೀರ ಕಿರುಕುಳ ಆರೋಪವನ್ನು ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಆ ನಾಯಕ ತನ್ನನ್ನು ಹೋಟೆಲ್‌ಗೆ ಆಹ್ವಾನಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.
ಆಕ್ಷೇಪಾರ್ಹ ಸಂದೇಶಗಳ ಆರೋಪ
ಯುವ ನಾಯಕ ತನಗೆ ಹಲವು ಬಾರಿ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ರಿನಿ ಆನ್ ಜಾರ್ಜ್ ಹೇಳಿದ್ದಾರೆ. ಈ ವಿಚಾರವನ್ನು ಆತನ ಪಕ್ಷಕ್ಕೆ ಹೇಳುವುದಾಗಿ ತಾನು ಹೇಳಿದಾಗ, ‘ಹೇಳು’ ಎಂದು ಆತ ಸವಾಲು ಹಾಕಿದ್ದ ಎಂದೂ ನಟಿ ತಿಳಿಸಿದ್ದಾರೆ.
ಆ ಯುವ ರಾಜಕಾರಣಿ ಹಲವಾರು ರಾಜಕಾರಣಿಗಳ ಪತ್ನಿಯರು ಮತ್ತು ಹೆಣ್ಣು ಮಕ್ಕಳ ಜತೆಯೂ ಇದೇ ರೀತಿ ವರ್ತಿಸಿದ್ದಾನೆ ಎಂದು ರಿನಿ ಹೇಳಿದ್ದು, ಈ ವಿಚಾರವನ್ನು ಇನ್ನಷ್ಟು ಗಂಭೀರವಾಗಿಸಿದೆ.
ಎಲ್ಲ ಮಹಿಳೆಯರ ಪರವಾಗಿ ಮಾತನಾಡುತ್ತಿದ್ದೇನೆ
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಹಲವು ಮಹಿಳೆಯರು ಎದುರಿಸುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಅವರಲ್ಲಿ ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಹಾಗಾಗಿ ನಾನು ಎಲ್ಲರ ಪರವಾಗಿ ಮಾತನಾಡಲು ನಿರ್ಧರಿಸಿದೆ ಎಂದು ರಿನಿ ಹೇಳಿದ್ದಾರೆ. ಈ ಆರೋಪಗಳು ಕೇರಳದ ರಾಜಕೀಯ ಮತ್ತು ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.