
ನವದೆಹಲಿ: ಎರಡು ದಶಕಗಳಿಗೂ ಹೆಚ್ಚು ಕಾಲ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ತೆಲುಗು ನಟಿ ಪ್ರತ್ಯುಷಾ ಸಾವು ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಈಗ ತಾರ್ಕಿಕ ಅಂತ್ಯ ಹಾಡಿದೆ. 2002 ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪ್ರತ್ಯುಷಾ ಅವರ ಗೆಳೆಯ ಗುಡಿಪಲ್ಲಿ ಸಿದ್ಧಾರ್ಥ ರೆಡ್ಡಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠವು, ಆತ್ಮಹತ್ಯೆ ಒಪ್ಪಂದ ಮಾಡಿಕೊಂಡು ಬದುಕುಳಿದವರು ಕಾನೂನಿನಡಿಯಲ್ಲಿ ಶಿಕ್ಷಾರ್ಹರು ಎಂದು ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಷ ಸೇವಿಸಿದ್ದರು ಎಂಬುದು ಸಾಬೀತಾಗಿದೆ. ಸತ್ತವರ ನಿರ್ಧಾರಕ್ಕೆ ಬದುಕುಳಿದವರ ಭಾಗವಹಿಸುವಿಕೆ ಮತ್ತು ಪ್ರಚೋದನೆಯೇ ನೇರ ಕಾರಣವಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಿದ್ಧಾರ್ಥ ರೆಡ್ಡಿ 4 ವಾರಗಳ ಒಳಗಾಗಿ ಪೊಲೀಸರಿಗೆ ಶರಣಾಗುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಮೂಲಕ 23 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಪ್ರತ್ಯುಷಾ ತಾಯಿ ಸರೋಜಿನಿ ಅವರಿಗೆ ಒಂದು ಹಂತದ ನ್ಯಾಯ ಸಿಕ್ಕಂತಾಗಿದೆ. ಈ ಹಿಂದೆ ಹೈಕೋರ್ಟ್ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದ್ದು, ಪರಸ್ಪರ ಸಾಯಲು ಒಪ್ಪಿಕೊಳ್ಳುವುದು ಕೂಡ ಅಪರಾಧ ಪ್ರೇರಣೆಯ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.



































