
ಮೆಲ್ಬೋರ್ನ್: ತಮ್ಮ ಕೈಚೀಲದಲ್ಲಿ ಒಂದು ಗೇಣು ಮಲ್ಲಿಗೆ ಹೂವು ಇಟ್ಟುಕೊಂಡಿದ್ದ ಕಾರಣಕ್ಕೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಸುಮಾರು 1.14 ಲಕ್ಷ ರೂ. (ಸುಮಾರು $1,375 AUD) ದಂಡ ವಿಧಿಸಲಾಗಿದೆ ಎಂದು ಮಲಯಾಳಂ ನಟಿ ನವ್ಯಾ ನಾಯರ್ ಅಚ್ಚರಿಯ ವಿಷಯವೊಂದನ್ನು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಕಠಿಣ ಕಾನೂನು
ಹೂವಿದ್ದ ಕಾರಣಕ್ಕೆ ಈ ಮೊತ್ತದ ದಂಡ ಯಾಕೆ ಎಂದು ಹಲವರು ಆಶ್ಚರ್ಯ ಪಡಬಹುದು. ಆಸ್ಟ್ರೇಲಿಯಾಕ್ಕೆ ಬರುವ ವಿದೇಶಿ ಪ್ರಯಾಣಿಕರು ಯಾವುದೇ ಸಸ್ಯ, ಆಹಾರ ಅಥವಾ ಪ್ರಾಣಿಜನ್ಯ ವಸ್ತುಗಳನ್ನು ತಮ್ಮೊಂದಿಗೆ ತರುವಾಗ ಕಡ್ಡಾಯವಾಗಿ ಘೋಷಿಸಿಕೊಳ್ಳಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಕೀಟಗಳು, ರೋಗಕಾರಕಗಳು ಮತ್ತು ಆಕ್ರಮಣಕಾರಿ ಜಾತಿಗಳು ದೇಶದ ಜೀವವೈವಿಧ್ಯಕ್ಕೆ ಮತ್ತು ಕೃಷಿಗೆ ಹಾನಿ ಮಾಡದಂತೆ ತಡೆಯುವುದು ಈ ನಿಯಮದ ಮುಖ್ಯ ಉದ್ದೇಶ. ಹೀಗಾಗಿ, ನವ್ಯಾ ನಾಯರ್ ಅವರು ಹೂವನ್ನು ಘೋಷಿಸದ ಕಾರಣ ನಿಯಮ ಉಲ್ಲಂಘನೆಯಾಗಿದೆ.