
ಉಡುಪಿ: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಗುರುವಾರ ಸಾಂಸ್ಕೃತಿಕ ನಗರಿ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ದರ್ಶನ ಪಡೆದರು. ಪ್ರಸ್ತುತ ಪರ್ಯಾಯ ಪೀಠವನ್ನಲಂಕರಿಸಿರುವ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಸರ್ವಜ್ಞ ಪೀಠದಲ್ಲಿ ಭೇಟಿ ಮಾಡಿದ ಅವರು, ಶ್ರೀಗಳ ಆಶೀರ್ವಾದ ಪಡೆದರು. ಪರ್ಯಾಯ ಶ್ರೀಗಳು ನಟಿಗೆ ಫಲ-ಮಂತ್ರಾಕ್ಷತೆ ನೀಡಿ ಹರಸಿದರು.
ಕೃಷ್ಣನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಟಿ ಭಾರತಿ ಅವರು, ಮಠದ ಪಾವಿತ್ರ್ಯತೆ ಮತ್ತು ಭಕ್ತಿಭಾವದ ಕುರಿತು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ಮಧೂರು ನಾರಾಯಣ ಶರಳಾಯ ಉಪಸ್ಥಿತರಿದ್ದು, ನಟಿಯನ್ನು ಬರಮಾಡಿಕೊಂಡರು. ಚಲನಚಿತ್ರ ರಂಗದ ಹಿರಿಯ ಕೊಂಡಿಯಾಗಿರುವ ನಟಿಯ ಆಗಮನವು ಮಠದ ಆವರಣದಲ್ಲಿ ಭಕ್ತರ ಗಮನ ಸೆಳೆಯಿತು. ಈ ಭೇಟಿಯು ಅತ್ಯಂತ ಸೌಹಾರ್ದಯುತವಾಗಿ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.



































