
ಬೆಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಹೋರಾಟಗಾರ ತೇಜಸ್ ಗೌಡ ಅವರು ಯೂಟ್ಯೂಬರ್ ಸಮೀರ್ ವಿರುದ್ಧ ಡಿಜಿ-ಐಜಿಪಿಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಅಕ್ರಮ ಹಣ ಸಂದಾಯದ ಬಗ್ಗೆ ಅನುಮಾನ
ತೇಜಸ್ ಗೌಡ ಅವರು ತಮ್ಮ ದೂರಿನಲ್ಲಿ, “ಯೂಟ್ಯೂಬರ್ ಸಮೀರ್ ಸುಖಾಸುಮ್ಮನೆ ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ವೀಡಿಯೋಗಳನ್ನು ಮಾಡುವುದಕ್ಕೆ ವಿದೇಶಗಳಿಂದ ಅಕ್ರಮ ಹಣ ಸಂದಾಯವಾಗುತ್ತಿರುವ ಬಗ್ಗೆ ಅನುಮಾನ ಮೂಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮೀರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತೇಜಸ್ ಮನವಿ ಮಾಡಿದ್ದಾರೆ. ಅಲ್ಲದೆ, ಈ ರೀತಿ ಅಪಪ್ರಚಾರ ಮಾಡುವ ವೀಡಿಯೋಗಳನ್ನು ಹಾಕುವುದಕ್ಕೆ ವಿವಿಧ ಯೂಟ್ಯೂಬರ್‌ಗಳಿಗೆ ಬೇರೆ ದೇಶಗಳಿಂದ ಹಣ ಬರುತ್ತಿರುವ ಬಗ್ಗೆಯೂ ತನಿಖೆ ಮಾಡುವಂತೆ ಅವರು ಬೆಂಗಳೂರಿನ ಇಡಿ ಕಚೇರಿಗೂ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಪ್ರಮುಖ ಕಾನೂನು ವಿಭಾಗಗಳು
ತೇಜಸ್ ಗೌಡ ಅವರು ತಮ್ಮ ದೂರಿನಲ್ಲಿ, ಯೂಟ್ಯೂಬರ್ ಸಮೀರ್ ವಿರುದ್ಧ ಹಲವು ಕಾನೂನು ವಿಭಾಗಗಳ ಅಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
- ಭಾರತೀಯ ನ್ಯಾಯ ಸಂಹಿತೆ 2023ರ ಅಡಿ, ಸುಳ್ಳು ಮಾಹಿತಿ, ಧರ್ಮ ಮತ್ತು ಭಾಷೆಗಳ ನಡುವೆ ದ್ವೇಷ ಬಿತ್ತುವುದು, ದ್ವೇಷ ಹುಟ್ಟಿಸುವ ಸುಳ್ಳು ಪ್ರಕಟಣೆ, ಮೋಸ, ಅಪಮಾನ, ಇತ್ಯಾದಿ.
- ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ, ಮೋಸದಿಂದ ಮಾಹಿತಿ ಪ್ರಸಾರ ಮಾಡುವುದು, ಸಾರ್ವಜನಿಕ ಶಾಂತಿಗೆ ಹಾನಿ ಮಾಡುವುದು.