
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ದುಬಾರಿ ಬೆಲೆಯ 100ಕ್ಕೂ ಹೆಚ್ಚು ಬೈಕ್ ಕದ್ದಿದ್ದ ಆಂಧ್ರಪ್ರದೇಶ ಮೂಲದ ಪ್ರಸಾದ್ ಬಾಬುವನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 1.45 ಕೋಟಿ ಮೌಲ್ಯದ 100 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಬಂಗಾರುಪಾಳ್ಯಂ ನಿವಾಸಿಯಾಗಿರುವ ಪ್ರಸಾದ್ ಬಾಬು ಪ್ರತಿದಿನ ಸಂಜೆ ಬಸ್‌ನಲ್ಲಿ ಬೆಂಗಳೂರಿಗೆ ಬಂದು, ಕೆಆರ್ ಪುರ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದ. ಮನೆ ಮುಂದೆ ನಿಲ್ಲಿಸಿದ ದುಬಾರಿ ಬೆಲೆಯ ಬೈಕ್‌ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಕದ್ದ ದಿನವೇ ಬೈಕ್‌ನಲ್ಲಿ ಊರಿಗೆ ಪರಾರಿಯಾಗುತ್ತಿದ್ದ.
ಬೆಂಗಳೂರು, ತಿರುಪತಿ, ಚಿತ್ತೂರು ಸೇರಿ ಹಲವೆಡೆ ಪ್ರಸಾದ್ ಬಾಬು ಬೈಕ್ ಕಳ್ಳತನ ಮಾಡಿದ್ದ. ಕದ್ದ ವಾಹನಗಳನ್ನು 15-20 ಸಾವಿರಕ್ಕೆ ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ. ಈ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದ.
ಕೆಆರ್ ಪುರ ಪೊಲೀಸರು ಕಾರ್ಯಾಚರಣೆ ನಡೆಸಿ, 20 ರಾಯಲ್ ಎನ್‌ಫೀಲ್ಡ್, 30 ಫಲ್ಸರ್, 40 ಆಕ್ಟಿವಾ ಸೇರಿದಂತೆ ಒಟ್ಟು 100 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.