
ಮುಂಬೈ: ಈಗಿನ ಕಾಲದಲ್ಲಿ ಯಾರೂ ಕೂಡಾ ಸಣ್ಣ ಮೊತ್ತದ ಹಣವನ್ನು ಉಚಿತವಾಗಿ ನೀಡಲು ಹಿಂಜರಿಯುತ್ತಾರೆ. ಆದರೆ, ಬರೋಬ್ಬರಿ 72 ಕೋಟಿ ರೂಪಾಯಿ ಆಸ್ತಿ ತಮ್ಮ ಹೆಸರಿಗೆ ಅನಿರೀಕ್ಷಿತವಾಗಿ ಬಂದಾಗಲೂ, ಬಾಲಿವುಡ್ ನಟ ಸಂಜಯ್ ದತ್ ಅದನ್ನು ಸ್ವೀಕರಿಸದೆ, ನೀಡಿದವರ ಕುಟುಂಬಕ್ಕೆ ವಾಪಸ್ ನೀಡುವ ಮೂಲಕ ತಮ್ಮ ದೊಡ್ಡತನ ಮೆರೆದಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಈ ಅಚ್ಚರಿಯ ಘಟನೆಯನ್ನು ಸ್ವತಃ ಸಂಜಯ್ ದತ್ ಅವರೇ ಬಹಿರಂಗಪಡಿಸಿದ್ದಾರೆ.
‘ಕರ್ಲಿ ಟೇಲ್ಸ್’ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಸಂಜಯ್ ದತ್, “ನಿಮ್ಮ ಅಭಿಮಾನಿಯೊಬ್ಬರು ನಿಮಗೆ 72 ಕೋಟಿ ರೂಪಾಯಿ ಆಸ್ತಿಪಾಸ್ತಿ, ಹಣ ನೀಡಿದ್ದು ನಿಜವೇ?” ಎಂಬ ಪ್ರಶ್ನೆಗೆ, “ಆ ಘಟನೆ ನಡೆದಿದ್ದು ನಿಜ, ಮತ್ತು ನಾನು ಅದನ್ನು ಅವರ ಕುಟುಂಬಕ್ಕೆ ವಾಪಸ್ ನೀಡಿದೆ” ಎಂದು ಖಚಿತಪಡಿಸಿದ್ದಾರೆ.
ಅಭಿಮಾನದಿಂದ ಆಸ್ತಿ ದಾನ: ನಿಶಾ ಪಾಟೀಲ್‌ರ ಅನಿರೀಕ್ಷಿತ ನಡೆ
2018ರಲ್ಲಿ ಸಂಜಯ್ ದತ್ ಅವರ ಅಭಿಮಾನಿ, 62 ವರ್ಷ ವಯಸ್ಸಿನ ಮುಂಬೈನ ಗೃಹಿಣಿ ನಿಶಾ ಪಾಟೀಲ್ ಅವರು ತಮಗೆ ವಾಸಿಯಾಗದ ಕಾಯಿಲೆ ಇತ್ತು. ತಮ್ಮ ಮರಣಾನಂತರ ತಮ್ಮೆಲ್ಲಾ ಸಂಪತ್ತನ್ನು ನಟ ಸಂಜಯ್ ದತ್ ಅವರಿಗೆ ನೀಡುವಂತೆ ತಮ್ಮ ಬ್ಯಾಂಕ್ ಹಾಗೂ ವಕೀಲರಿಗೆ ಸೂಚಿಸಿದ್ದರು. ಈ ಅನಿರೀಕ್ಷಿತ ಘಟನೆ ಸಂಜಯ್ ದತ್ ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು. ನಿಶಾ ಪಾಟೀಲ್ ಬರೋಬ್ಬರಿ 72 ಕೋಟಿ ರೂಪಾಯಿ ಸಂಪತ್ತಿನ ಒಡತಿಯಾಗಿದ್ದರು. ಈ ಸಂಪತ್ತನ್ನು ಸಂಪೂರ್ಣವಾಗಿ ಸಂಜಯ್ ದತ್ ಮೇಲಿನ ಅಭಿಮಾನದ ಕಾರಣಕ್ಕೆ ಅವರಿಗೆ ದಾನ ಮಾಡಿದ್ದರು.
ನಿಶಾ ಪಾಟೀಲ್‌ರ ಮರಣಾನಂತರ ಅವರ 72 ಕೋಟಿ ರೂಪಾಯಿ ಆಸ್ತಿ ಸಂಜಯ್ ದತ್ ಹೆಸರಿಗೆ ವರ್ಗಾವಣೆಯಾಗಿತ್ತು. ಆದರೆ, ಸಂಜಯ್ ದತ್ ಆ ಎಲ್ಲ ಆಸ್ತಿಪಾಸ್ತಿ ಮತ್ತು ಹಣವನ್ನು ತಾವೇ ಇಟ್ಟುಕೊಳ್ಳಲಿಲ್ಲ ಅಥವಾ ತಮ್ಮ ಮಕ್ಕಳಿಗೂ ನೀಡಲಿಲ್ಲ. ಬದಲಿಗೆ, ನಿಶಾ ಪಾಟೀಲ್ ಕುಟುಂಬಸ್ಥರಿಗೆ ವಾಪಸ್ ನೀಡಿದ್ದಾರೆ. “ನಾನು ಅದನ್ನು ಅವರ ಕುಟುಂಬಸ್ಥರಿಗೆ ವಾಪಸ್ ನೀಡಿದೆ” ಎಂದು ನಟ ಸಂಜಯ್ ದತ್ ಈಗ ತಿಳಿಸಿದ್ದಾರೆ.
ಸಂಜಯ್ ದತ್‌ರ ವಿವಾದಾತ್ಮಕ, ಯಶಸ್ವಿ ವೃತ್ತಿಜೀವನ
1981ರಲ್ಲಿ ‘ರಾಕಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಂಜಯ್ ದತ್, ವಿವಾದಾತ್ಮಕವಾಗಿದ್ದರೂ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದಾರೆ. ‘ವಿಧಾತಾ’, ‘ನಾಮ್’, ‘ಸಾಜನ್’, ‘ಖಲ್ ನಾಯಕ್’ ಮತ್ತು ‘ವಾಸ್ತವ್’ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿ, ಬಾಲಿವುಡ್‌ನ ಅತ್ಯಂತ ವರ್ಚಸ್ವಿ ನಟರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಆದಾಗ್ಯೂ, ಸಂಜಯ್ ದತ್ ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. 1993ರ ಮುಂಬೈ ಸ್ಫೋಟಗಳಿಗೆ ಸಂಬಂಧಿಸಿದ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಅವರನ್ನು ಟಾಡಾ ಕಾಯಿದೆಯಡಿ ಬಂಧಿಸಲಾಯಿತು. ಅಂತಿಮವಾಗಿ ಟಾಡಾ ಅಡಿಯಲ್ಲಿ ಖುಲಾಸೆಗೊಂಡರೂ, ಶಸ್ತ್ರಾಸ್ತ್ರ ಕಾಯ್ದೆಯಡಿ ಅವರನ್ನು ಅಪರಾಧಿ ಎಂದು ಘೋಷಿಸಲಾಯಿತು ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಲವಾರು ಪೆರೋಲ್‌ಗಳ ನಂತರ ಸಂಜಯ್ ದತ್ ಅವರು 2016ರಲ್ಲಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದರು.