
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಡಿ-ಅಡಿಕ್ಷನ್ ಸೆಂಟರ್‌ನಲ್ಲಿ ದಾಖಲಾಗಿದ್ದ ರೋಗಿಯೊಬ್ಬನ ಹೊಟ್ಟೆಯಲ್ಲಿ ವೈದ್ಯರು 29 ಚಮಚಗಳು, 19 ಟೂತ್‌ಬ್ರಷ್‌ಗಳು ಮತ್ತು 2 ಪೆನ್‌ಗಳನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಬುಲಂದ್‌ಶಹರ್ ನಿವಾಸಿ, 35-40 ವರ್ಷದ ಸಚಿನ್ ಎಂಬ ಮಾದಕ ವ್ಯಸನಿಯನ್ನು ಆತನ ಕುಟುಂಬಸ್ಥರು ಹಾಪುರ್/ಬುಲಂದ್‌ಶಹರ್‌ನ ಡಿ-ಅಡಿಕ್ಷನ್ ಕೇಂದ್ರಕ್ಕೆ ಸೇರಿಸಿದ್ದರು. ಈ ಕೇಂದ್ರದಲ್ಲಿ ರೋಗಿಗಳಿಗೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ ಎಂದು ಸಚಿನ್ ಆರೋಪಿಸಿದ್ದಾನೆ. “ನಮಗೆ ಕಡಿಮೆ ತರಕಾರಿ ಮತ್ತು ಕೆಲವು ಚಪಾತಿಗಳನ್ನು ಮಾತ್ರ ಕೊಡುತ್ತಿದ್ದರು. ಮನೆಯಿಂದ ಬಂದರೂ ಹೆಚ್ಚಿನವು ನಮಗೆ ತಲುಪುತ್ತಿರಲಿಲ್ಲ. ಕೆಲವೊಮ್ಮೆ ದಿನಕ್ಕೆ ಒಂದು ಬಿಸ್ಕತ್ತು ಮಾತ್ರ ಸಿಗುತ್ತಿತ್ತು” ಎಂದು ಆತ ಹೇಳಿಕೊಂಡಿದ್ದಾನೆ.
ಕೇಂದ್ರದ ನಿರ್ವಹಣೆ ಮತ್ತು ಹಸಿವಿನಿಂದ ಕೋಪಗೊಂಡ ಈ ವ್ಯಕ್ತಿ, ಸ್ಟೀಲ್ ಚಮಚಗಳು ಮತ್ತು ಇತರೆ ವಸ್ತುಗಳನ್ನು ಕದ್ದು ನುಂಗಲು ಪ್ರಾರಂಭಿಸಿದ್ದ. ಕೆಲ ದಿನಗಳ ನಂತರ ಹೊಟ್ಟೆ ನೋವು ಕಾಣಿಸಿಕೊಂಡಾಗ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಶಸ್ತ್ರಚಿಕಿತ್ಸೆ ಮೂಲಕ ವಸ್ತುಗಳ ಹೊರತೆಗೆತ
ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್‌ಗಳ ಮೂಲಕ ಹೊಟ್ಟೆಯಲ್ಲಿ ಭಾರೀ ಪ್ರಮಾಣದ ಲೋಹದ ಮತ್ತು ಪ್ಲಾಸ್ಟಿಕ್ ವಸ್ತುಗಳು ಇರುವುದು ದೃಢಪಟ್ಟಿತ್ತು. ವಸ್ತುಗಳ ಪ್ರಮಾಣ ಹೆಚ್ಚಾಗಿದ್ದರಿಂದ ಎಂಡೋಸ್ಕೋಪಿ ಪ್ರಯತ್ನ ವಿಫಲವಾಯಿತು. ನಂತರ, ವೈದ್ಯರು ಸಚಿನ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲಾ ವಸ್ತುಗಳನ್ನು ಹೊರತೆಗೆದಿದ್ದಾರೆ.



































