
ನಾರಾಯಣಪೇಟೆ : “ಅಪ್ಪಾ ಬೇಡಪ್ಪಾ, ನನ್ನ ಹತ್ತಿರ ಬರಬೇಡಿ” ಎಂದು ಪುಟ್ಟ ಮಗಳು ಆರ್ತನಾಧ ಮಾಡಿದ್ದರೂ, ಕರುಣೆ ತೋರದ ಕುಡುಕ ತಂದೆ ತನ್ನದೇ 10 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೈಶಾಚಿಕ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಜುಲೈ 25ರಂದು ಮರಿಕಲ್ ಮಂಡಲ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ.
ಮನೆಯಲ್ಲೇ ನಿರ್ದಯಿ ಕೃತ್ಯ
ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದ ಬಾಲಕಿ, ಇತ್ತೀಚೆಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಹಾಸ್ಟೆಲ್ ಬಿಟ್ಟು ಮನೆಗೆ ಮರಳಿದ್ದಳು. ಜುಲೈ 25ರ ಮಧ್ಯಾಹ್ನ, ತಾಯಿ ದಿನಗೂಲಿ ಕೆಲಸಕ್ಕೆ ತೆರಳಿದ್ದಾಗ, ಮದ್ಯಪಾನ ಮಾಡಿದ್ದ ತಂದೆ ಮನೆಗೆ ಬಂದು ಮಗುವಿನ ಮೇಲೆ ಕಿರುಕುಳ ನೀಡಿದ್ದಾನೆ. ತನ್ನದೇ ಮಗಳ ಆಕ್ರಂದನ, ಬೇಡಿಕೆಗಳನ್ನು ನಿರ್ಲಕ್ಷಿಸಿ, ಆಕೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ.
ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿ, ಆಸ್ಪತ್ರೆಗೆ ದಾಖಲು
ಬಾಲಕಿಯ ಕಿರುಚಾಟ ಕೇಳಿ ಓಡಿಬಂದ ಸ್ಥಳೀಯರಿಗೆ ಆಕೆ ರಕ್ತಸ್ರಾವದಿಂದ ನರಳುತ್ತಿರುವುದು ಕಂಡುಬಂದಿದೆ. ತಕ್ಷಣ ಆಕೆಯನ್ನು ಅಕ್ಕಪಕ್ಕದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಾರಿಕಲ್ ಸರ್ಕಾರಿ ಆಸ್ಪತ್ರೆಗೆ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೆಹಬೂಬ್‌ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರಿಂದ ತನಿಖೆ, ಆರೋಪಿ ಪತ್ತೆಗೆ ಬಲೆ
ವೈದ್ಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳುವಂತೆ ಕುಟುಂಬಕ್ಕೆ ಸೂಚಿಸಿದ್ದಾರೆ. ತಾಯಿ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಳಿಕ ಆರೋಪಿ ತಂದೆ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಶೋಧ ಕಾರ್ಯ ನಡೆಸುತ್ತಿದ್ದಾರೆ. “ಬಾಳಿಗೆ ರಕ್ಷಕನಾಗಬೇಕಿದ್ದ ತಂದೆಯೇ ಹೇಗೆ ಇಂತಹ ಹೀನಕೃತ್ಯಕ್ಕೆ ಇಳಿಯಬಲ್ಲನು?” ಎಂಬ ಪ್ರಶ್ನೆ ಇಡೀ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.