
ಮೈಸೂರು : ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಫೋಟಿಸಿ ಕಗ್ಗೊಲೆ ಮಾಡಿರುವ ಭೀಕರ ಘಟನೆ ಮೈಸೂರಿನಲ್ಲಿ ನಡೆದಿದೆ. ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದ ಲಾಡ್ಜ್ ಒಂದರಲ್ಲಿ ಈ ಕೃತ್ಯ ಎಸಗಲಾಗಿದೆ.
ಗೆರಸನಹಳ್ಳಿ ಗ್ರಾಮದ ರಕ್ಷಿತಾ (20) ಕೊಲೆಯಾದ ಮಹಿಳೆ. ಬಿಳಿಕೆರೆ ಗ್ರಾಮದ ಸಿದ್ಧರಾಜು ಎಂಬಾತ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ರಕ್ಷಿತಾ ಕೇರಳದ ವ್ಯಕ್ತಿಯೊಬ್ಬರೊಂದಿಗೆ ವಿವಾಹವಾಗಿದ್ದಳು ಮತ್ತು ದಂಪತಿಗೆ 2 ವರ್ಷದ ಮಗುವಿದೆ. ಆದರೆ, ಮದುವೆಗೂ ಮುನ್ನ ರಕ್ಷಿತಾ ಮತ್ತು ಆಕೆಯ ದೂರದ ಸಂಬಂಧಿಯೂ ಆಗಿದ್ದ ಸಿದ್ಧರಾಜು ನಡುವೆ ಪ್ರೇಮ ಸಂಬಂಧವಿತ್ತು. ಮದುವೆಯ ನಂತರವೂ ಅದು ಮುಂದುವರೆದಿತ್ತು ಎನ್ನಲಾಗಿದೆ.
ಕಳೆದ ಶುಕ್ರವಾರ, ಕೇರಳದಲ್ಲಿರುವ ಅತ್ತೆಗೆ ಹುಷಾರಿಲ್ಲ ಎಂದು ಸುಳ್ಳು ಹೇಳಿ ಮನೆಯಿಂದ ಬಂದ ರಕ್ಷಿತಾ, ಪ್ರಿಯಕರ ಸಿದ್ಧರಾಜು ಜೊತೆ ಕೆ.ಆರ್. ನಗರದ ದೇವಸ್ಥಾನಕ್ಕೆ ಹೋಗಿದ್ದಾರೆ. ನಂತರ ಸಾಲಿಗ್ರಾಮ ತಾಲ್ಲೂಕಿನ ಎಸ್.ಜಿ.ಆರ್. ಬಾರ್ ಅಂಡ್ ರೆಸ್ಟೋರೆಂಟ್
ನಲ್ಲಿ ರೂಂ ಪಡೆದು ಉಳಿದುಕೊಂಡಿದ್ದಾರೆ. ರೂಂನಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಸಿದ್ಧರಾಜು ತನ್ನ ಜೊತೆ ತಂದಿದ್ದ ಜಿಲೆಟಿನ್ ಕಡ್ಡಿಯನ್ನ ರಕ್ಷಿತಾಳ ಬಾಯಿಗೆ ಇಟ್ಟು ಸ್ಫೋಟ ಮಾಡಿದ್ದಾನೆ.
ಸ್ಫೋಟದ ತೀವ್ರತೆಗೆ ರಕ್ಷಿತಾಳ ಮುಖ ಛಿದ್ರವಾಗಿದ್ದು, ಲಾಡ್ಜ್ ಸಿಬ್ಬಂದಿ ಗಮನಕ್ಕೆ ಬಂದಾಗ ಸಿದ್ಧರಾಜು “ಮೊಬೈಲ್ ಬ್ಲಾಸ್ಟ್ ಆಗಿದೆ” ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.