
ನವದೆಹಲಿ : ದೇಶದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದೇಶಕ್ಕಾಗಿ ಸಲ್ಲಿಸಿದ ಸೇವೆಗಳನ್ನು ಶ್ಲಾಘಿಸಿದರು. ದೇಶ ಕಟ್ಟುವಲ್ಲಿ ಆರ್ ಎಸ್ ಎಸ್ ಶತಮಾನಗಳ ಇತಿಹಾಸ ಹೊಂದಿದೆ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್‌ಗೆ 100 ವರ್ಷ: ಹೆಮ್ಮೆ ಮತ್ತು ಸುವರ್ಣ ಅಧ್ಯಾಯ
ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ, “79ನೇ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆ ಜನ್ಮತಳೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಉಲ್ಲೇಖಿಸಲು ನಾನು ಹೆಮ್ಮೆ ಪಡುತ್ತೇನೆ. ದೇಶಕ್ಕಾಗಿ ನೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಮತ್ತು ಸುವರ್ಣ ಅಧ್ಯಾಯವಾಗಿದೆ” ಎಂದರು.
ಆರ್‌ಎಸ್‌ಎಸ್‌ನ ಮೂಲ ತತ್ವವಾದ “ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ” ಎಂಬ ಸಂಕಲ್ಪವನ್ನು ಉಲ್ಲೇಖಿಸಿದ ಅವರು, ಸ್ವಯಂಸೇವಕರು ಮಾತೃಭೂಮಿಯ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಹೇಳಿದರು. ಈ ಸೇವೆಯಿಂದಾಗಿಯೇ ಆರ್‌ಎಸ್‌ಎಸ್ ಇಂದು ವಿಶ್ವದ ಅತೀ ದೊಡ್ಡ ಎನ್‌ಜಿಒ (ಸೇವಾ ಸಂಸ್ಥೆ) ಆಗಿ ಬೆಳೆದಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಕೆಂಪುಕೋಟೆಯ ಸಮಾರಂಭ
ಶುಕ್ರವಾರ ಬೆಳಗ್ಗೆ ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರದ ರಾಜ್ಯ ಸಚಿವ ಸಂಜಯ್ ಸೇಠ್ ಮತ್ತು ಮೂರು ಸೇನಾ ಮುಖ್ಯಸ್ಥರು ಅವರನ್ನು ಬರಮಾಡಿಕೊಂಡರು. ಈ ಬಾರಿಯ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅಂದಾಜು 5,000 ವಿಶೇಷ ಗಣ್ಯರು ಭಾಗವಹಿಸಿದ್ದರು.