
ಹೆಬ್ರಿ : ಭಾರತದ ಸ್ವಾತಂತ್ರ್ಯ ಸಂಗ್ರಾಮವು ಎಲ್ಲ ಜಾತಿ, ಮತ, ಪಂಥ, ಧರ್ಮಗಳ ಎಲ್ಲೆ ಮೀರಿ, ಅಬಾಲರಿಂದ ವೃದ್ಧರಾಧಿಯಾಗಿ ಸರ್ವರ ಹೋರಾಟದ ಫಲವಾಗಿದೆ. ದೇಶಕ್ಕಾಗಿ 15ರ ಹರೆಯದಲ್ಲೇ ಪ್ರಾಣ ತ್ಯಾಗ ಮಾಡಿದ ಖುದಿರಾಮ್ ಬೋಸ್, ಆದಿವಾಸಿ ಜನಾಂಗ ನಾಯಕ ಬಿರ್ಸಾ ಮುಂಡ, ಎಳವೆಯಲ್ಲಿ ಪ್ರಾಣ ತೆತ್ತ ಭಗತ್ ಸಿಂಗ್, ಸುಖದೇವ್, ರಾಜಗುರು, ಸುಭಾಷ್ ಚಂದ್ರ ಬೋಸ್ ಮುಂತಾದವರು, ಸತ್ಯಾಗ್ರಹದ ಮೂಲಕ ಶಾಂತಿಯುತ ಹೋರಾಟ ನಡೆಸಿದ ಗಾಂಧೀಜಿಯವರು ಎಲ್ಲರಿಗೂ ಆದರ್ಶಪ್ರಾಯರು. ದೇಶದ ಮೂಲೆ ಮೂಲೆಯಲ್ಲೂ ಮೊಳಗಿದ ಈ ಸ್ವಾತಂತ್ರ ಹೋರಾಟದ ಕಿಚ್ಚಿನಲ್ಲಿ ನಮ್ಮ ಮುದ್ರಾಡಿಯ ಐದು ಜನ ಹೋರಾಟಗಾರರು ಸೇರಿರುವುದು ನಮ್ಮ ಊರು ಸ್ವಾತಂತ್ರ ಹೋರಾಟಗಾರರ ಊರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ. ಅಂದಿನ ಅವರ ಬಲಿದಾನ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಸಮಾಜದ ಒಳಿತಿಗಾಗಿ ನಾವೇನಾದರೂ ಮಾಡುವ ತುಡಿತ ನಮ್ಮೊಳಗಿರಬೇಕು ಎಂದು ಮುದ್ರಾಡಿಯ ಖ್ಯಾತ ವೈದ್ಯರಾದ ಎಂ.ಎಸ್. ರಾವ್ ಅಭಿಪ್ರಾಯಪಟ್ಟರು.
ಅವರು ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಪಾಲ್ಗೊಂಡು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ರಿ. ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಶೆಟ್ಟಿ ಅವರು ರಾಷ್ಟ್ರ ಧ್ವಜಾರೋಹಣವನ್ನು ನಡೆಸಿ ಶುಭ ಸಂದೇಶ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಂಸ್ಥೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಸ್ವಾಗತಿಸಿದರು. ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಮಿತಿಯ ಸದಸ್ಯರಾದ ಆಶಾ, ವನಿತ, ಜಯಂತಿ, ವಿದ್ಯಾರ್ಥಿ ನಾಯಕ ಕಾರ್ತಿಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಮತ್ತು ಅಂಜಲಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕ ಮಹೇಶ್ ನಾಯ್ಕ ಕೆ. ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಹಾಗೂ ಕರ್ಣಾರ್ಜುನ ಕಾಳಗ ಯಕ್ಷಗಾನ ತಾಳಮದ್ದಲೆ ನಡೆಯಿತು. ಭಾಗವತರಾಗಿ ಸಂಸ್ಥೆಯ ಕನ್ನಡ ಭಾಷಾ ಶಿಕ್ಷಕ ಪಿ.ವಿ. ಆನಂದ ಸಾಲಿಗ್ರಾಮ ಮತ್ತು ಮದ್ದಳೆಯಲ್ಲಿ ಕೃಷ್ಣ ಸಂತೆಕಟ್ಟೆ ಇವರು ಸಹಕರಿಸಿದರು.
ಶಿಕ್ಷಕರುಗಳಾದ ಶ್ಯಾಮಲಾ, ಚಂದ್ರಕಾಂತಿ ಹೆಗ್ಡೆ, ರಘುಪತಿ ಹೆಬ್ಬಾರ್, ಮಹೇಶ ಎಂ. ಕಾನ್ಗುಂಡಿ, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.