ಸುದ್ದಿ:
53ನೇ ಉಚಿತ ಸಾಮೂಹಿಕ ವಿವಾಹವು 2025ರ ಮೇ 3ರಂದು ಸಂಜೆ 6.48ಕ್ಕೆ ಬೆಳ್ತಂಗಡಿಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಗೋಧೂಳಿ ಲಗ್ನದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ಕುಪ್ಪಸ, ಮಂಗಳಸೂತ್ರ, ಹೂವಿನ ಮಾಲೆಯನ್ನು ನೀಡಲಾಗುವುದು. ಮದುವೆಯ ಎಲ್ಲ ಖರ್ಚು ವೆಚ್ಚವನ್ನು ಕ್ಷೇತ್ರವೇ ಭರಿಸಲಿದೆ. ಈ ಯೋಜನೆಯಲ್ಲಿ ಎರಡನೇ ಮದುವೆಗೆ ಅವಕಾಶವಿಲ್ಲ.
1972ರಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪ್ರೇರಣೆಯಿಂದ ಆರಂಭವಾದ ಉಚಿತ ಸಾಮೂಹಿಕ ವಿವಾಹ ಸರಳ ವಿವಾಹ ಪದ್ಧತಿ, ವರದಕ್ಷಿಣೆಯನ್ನು ತಡೆಯುವಿಕೆಗೆ ಪ್ರೇರಣೆ ನೀಡುತ್ತದೆ. ಈ ಕಾರ್ಯಕ್ರಮದ ಮೂಲಕ ಇಲ್ಲಿಯವರೆಗೆ ಒಟ್ಟು 12,900 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 25, 2025.
ಹೆಚ್ಚಿನ ಮಾಹಿತಿಗಾಗಿ: ಆಸಕ್ತರು ದೂರವಾಣಿ ಸಂಖ್ಯೆ 08256-266644 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.