
ಬೆಂಗಳೂರು : ಭಾರತದಲ್ಲಿ ತಾಯಂದಿರ ಪೋಷಣೆ ಮತ್ತು ಆರೋಗ್ಯಕ್ಕೆ ಒತ್ತು ನೀಡುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) 2025ರ ಅಡಿಯಲ್ಲಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ 5,000 ರೂಪಾಯಿಗಳ ಆರ್ಥಿಕ ಸಹಾಯಧನ ಸಿಗಲಿದೆ. ತಾಯಿಯ ಆರೋಗ್ಯವೇ ಕುಟುಂಬದ ಭದ್ರತೆ ಎಂಬ ಧ್ಯೇಯದೊಂದಿಗೆ ರೂಪಿಸಲಾಗಿರುವ ಈ ಯೋಜನೆಯು, ಪೌಷ್ಟಿಕತೆ, ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.
ಯೋಜನೆಯ ಆರಂಭ ಮತ್ತು ಇತಿಹಾಸ: ಜನವರಿ 1, 2017 ರಂದು ಆರಂಭಗೊಂಡ ಈ ಯೋಜನೆಯು, ಮೊದಲು ‘ಇಂದಿರಾ ಗಾಂಧಿ ಮಾತೃತ್ವ ಸಹಯೋಗ್ ಯೋಜನೆ’ ಎಂಬ ಹೆಸರಿನಲ್ಲಿ ಜಾರಿಯಲ್ಲಿತ್ತು. ನಂತರ ಇದಕ್ಕೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂದು ಮರುನಾಮಕರಣ ಮಾಡಿ ಹೊಸ ರೂಪ ನೀಡಲಾಯಿತು.
ಪ್ರಮುಖ ಉದ್ದೇಶಗಳು:
- ಗರ್ಭಿಣಿಯರಿಗೆ ಸೂಕ್ತ ಪೌಷ್ಟಿಕ ಆಹಾರ ಒದಗಿಸಿ ಆರೋಗ್ಯವನ್ನು ಸುಧಾರಿಸುವುದು.
- ಆರೋಗ್ಯಪೂರ್ಣ ಹೆರಿಗೆಗೆ ಪ್ರೋತ್ಸಾಹ ನೀಡುವುದು.
- ನಿಯಮಿತ ವೈದ್ಯಕೀಯ ತಪಾಸಣೆಗಳು ಮತ್ತು ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು.
- ತಾಯಿ-ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.
- ಗರ್ಭಾವಸ್ಥೆಯಲ್ಲಿ ತಾಯಂದಿರಿಗೆ ವಿಶ್ರಾಂತಿ ಪಡೆಯಲು ಆರ್ಥಿಕ ನೆರವು ನೀಡುವುದು.
ಯಾರಿಗೆ ಲಭ್ಯ? ಯಾರಿಗೆ ಇಲ್ಲ? ಅರ್ಹರು:
- ಕನಿಷ್ಠ 19 ವರ್ಷ ವಯಸ್ಸಿನ ಗರ್ಭಿಣಿ ಮಹಿಳೆಯರು.
- ಮೊದಲ ಗರ್ಭಧಾರಣೆಯಲ್ಲಿರುವವರು.
- ಹಾಲುಣಿಸುವ ತಾಯಂದಿರು (ಮೊದಲ ಮಗುವಿಗೆ).
ಅರ್ಹರಲ್ಲದವರು:
- ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ವೇತನ ಪಡೆಯುವ ಉದ್ಯೋಗಿಗಳು.
- ಇತರ ಯಾವುದೇ ಮಾತೃತ್ವ ಪ್ರಯೋಜನಗಳನ್ನು ಪಡೆಯುತ್ತಿರುವವರು.
ಹಣಕಾಸು ಸಹಾಯ – ಹಂತ ಹಂತವಾಗಿ ಪಾವತಿ: ಈ ಯೋಜನೆಯಡಿ ಒಟ್ಟು ₹5,000/- ಹಣಕಾಸು ನೆರವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಮೂರು ಕಂತುಗಳಲ್ಲಿ ನೀಡಲಾಗುತ್ತದೆ:
- ಮೊದಲ ಹಂತ (₹1,000): ನೋಂದಣಿ ಆದ ತಕ್ಷಣ (ಫಾರ್ಮ್ 1A ಸಲ್ಲಿಸಿದ ನಂತರ).
- ಎರಡನೇ ಹಂತ (₹2,000): ಗರ್ಭಧಾರಣೆಯ 6ನೇ ತಿಂಗಳ ಬಳಿಕ (ಫಾರ್ಮ್ 1B ಸಲ್ಲಿಸಿದ ನಂತರ).
- ಮೂರನೇ ಹಂತ (₹2,000): ಮಗುವಿಗೆ ಮೊದಲ ಲಸಿಕೆ ನೀಡಿದ ನಂತರ (ಫಾರ್ಮ್ 1C ಮತ್ತು ಜನನ ಪ್ರಮಾಣಪತ್ರ ಸಲ್ಲಿಸಿದ ನಂತರ).
ಹೆಚ್ಚುವರಿ ಪ್ರಯೋಜನ: ಜನನಿ ಸುರಕ್ಷಾ ಯೋಜನೆಯೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ನಡೆದರೆ, ಹೆಚ್ಚುವರಿಯಾಗಿ ₹1,000 ಲಭ್ಯವಿದ್ದು, ಒಟ್ಟು ₹6,000 ಸಹಾಯಧನ ಸಿಗಲಿದೆ.
ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಕೆ: ದಾಖಲೆಗಳು: ಎಂಸಿಪಿ (ಮದರ್ ಚೈಲ್ಡ್ ಪ್ರೊಟೆಕ್ಷನ್) ಕಾರ್ಡ್ ಪ್ರತಿ, ತಾಯಿ ಮತ್ತು ಪತಿಯ ಆಧಾರ್ ಕಾರ್ಡ್, ಬ್ಯಾಂಕ್/ಅಂಚೆ ಪಾಸ್‌ಬುಕ್, ಸಹಿ ಮಾಡಿದ ಫಾರ್ಮ್‌ಗಳು (1A, 1B, 1C), ಮತ್ತು ಲಿಖಿತ ಒಪ್ಪಿಗೆ ಪತ್ರ. ಅರ್ಜಿ ಸಲ್ಲಿಸುವ ವಿಧಾನ: ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅರ್ಹತೆಯನ್ನು ಪರಿಶೀಲಿಸಿ, ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ನಂತರ ಸ್ವೀಕೃತಿ ಪಾವತಿ ವಿವರ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ:
- ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆಯಬಹುದು.
- ಅಧಿಕೃತ ವೆಬ್‌ಸೈಟ್: http://wcd.nic.in
- ಸಹಾಯವಾಣಿ: 011 – 23380329
ಈ ಯೋಜನೆಯು ಒಂದು ಗರ್ಭಧಾರಣೆಗೆ ಮಾತ್ರ ಲಭ್ಯ. ಮಧ್ಯಂತರ ಗರ್ಭಪಾತವಾದಲ್ಲಿ, ಬಾಕಿ ಹಣ ಮುಂದಿನ ಗರ್ಭಕ್ಕೆ ವರ್ಗವಾಗಬಹುದು. ಮಗು ಹುಟ್ಟಿದ ನಂತರ ಸಾವಿಗೀಡಾದಲ್ಲಿ, ಮುಂದಿನ ಗರ್ಭಕ್ಕೆ ಹೊಸ ಅನುಮೋದನೆ ಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.