
ಥೈಲ್ಯಾಂಡ್: ನಾಲ್ಕು ವರ್ಷದ ಅವಳಿ ಮಕ್ಕಳಿಗೆ ಪರಸ್ಪರ ಮದುವೆ ಮಾಡಿದಂತಹ ವಿಶಿಷ್ಟ ಘಟನೆಯೊಂದು ಥೈಲ್ಯಾಂಡ್‌ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಹೆಣ್ಣು ಮತ್ತು ಒಂದು ಗಂಡು ಅವಳಿ ಮಕ್ಕಳಿಗೆ ಮದುವೆ ಮಾಡಿರುವ ಈ ವಿಡಿಯೋ ಅನೇಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ, ನಮ್ಮ ಸಂಸ್ಕೃತಿ ಸೇರಿದಂತೆ ಬಹುತೇಕ ಸಂಸ್ಕೃತಿಗಳಲ್ಲಿ ಅವಳಿಗಳನ್ನು ಸೋದರ-ಸೋದರಿಯರು ಎಂದು ಭಾವಿಸಲಾಗುತ್ತದೆ. ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ನಡುವೆ ಮದುವೆ ನಿಷಿದ್ಧವಾಗಿರುವಂತೆ, ಅವಳಿಗಳ ನಡುವೆ ವಿವಾಹ ನಡೆಯುವುದಿಲ್ಲ. ಆದರೆ, ಥೈಲ್ಯಾಂಡ್‌ನಲ್ಲಿ ಒಂದೇ ತಾಯಿ ಗರ್ಭದಲ್ಲಿ ಜನಿಸಿದ ಅವಳಿಗಳಿಗೆ ಮದುವೆ ಮಾಡಿಸಲಾಗಿದೆ. ವೈರಲ್ ವಿಡಿಯೋದಲ್ಲಿ, ಅವಳಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ವಿವಾಹದ ಸಂಪ್ರದಾಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ ಈ ಸಾಂಕೇತಿಕ ಮದುವೆಯ ಆಚರಣೆಯು ಒಂದು ಸಂಪ್ರದಾಯವಾಗಿದೆ. ರೆಸಾರ್ಟ್‌ನಲ್ಲಿ ನಡೆದ ಈ ಅದ್ದೂರಿ ಆಚರಣೆಯಲ್ಲಿ ಥಟ್ಯಾನಪೋರ್ನ್ ಸೋರ್ನ್ಚೆ ಮತ್ತು ಅವರ ಅವಳಿ ಸಹೋದರ ಥಟ್ಟಾಥಾರ್ನ್ ಪರಸ್ಪರ ಮದುವೆಯಾಗಿದ್ದಾರೆ. ಈ ಸಮಾರಂಭದಲ್ಲಿ ಹಲವಾರು ಬೌದ್ಧ ಸನ್ಯಾಸಿಗಳು ಭಾಗಿಯಾಗಿದ್ದು, ಪುಟ್ಟ ದಂಪತಿಗಳಿಗೆ ಆಶೀರ್ವದಿಸಿದ್ದಾರೆ. 4 ವರ್ಷದ ವಧು ತನ್ನ ಅವಳಿ ಸಹೋದರನಿಗೆ ಹಾರ ಹಾಕಿ, ಆತನ ಕೆನ್ನೆಗೆ ಮುತ್ತಿಕ್ಕಿ ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದ್ದಾಳೆ.
ಈ ಮದುವೆಯಲ್ಲಿ ಕುಟುಂಬದವರು ಸಾಂಪ್ರದಾಯಿಕ ವರದಕ್ಷಿಣೆ ಮೆರವಣಿಗೆಯನ್ನು ಕೂಡ ಆಯೋಜಿಸಿದ್ದರು. ಇದರಲ್ಲಿ ವಧುವಿಗೆ 4 ಮಿಲಿಯನ್ ಬಹ್ (ಅಂದಾಜು 1,05,58,228 ಭಾರತೀಯ ರೂಪಾಯಿ) ವರದಕ್ಷಿಣೆಯಾಗಿ ನೀಡಲಾಗಿದೆ.
ಥೈಲ್ಯಾಂಡ್‌ನಲ್ಲಿ ಅವಳಿಗಳಿಗೆ ಮದುವೆ ಏಕೆ? ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ, ಒಂದೇ ತಾಯಿ ಗರ್ಭದಲ್ಲಿ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳು ಜನಿಸಿದರೆ, ಅವರು ಹಿಂದಿನ ಜನ್ಮದಲ್ಲಿ ಪ್ರೇಮಿಗಳಾಗಿದ್ದರು ಎಂದು ನಂಬಲಾಗಿದೆ. ಹೀಗಾಗಿ, ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಮದುವೆ ಮಾಡದಿದ್ದರೆ ಅದು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಅವರ ಹಳೆಯ ಜನ್ಮದ ನಂಟಿನ ಜೊತೆಗೆ, ಮದುವೆಯಾಗದೇ ಹೋದರೆ ಅವರಿಗೆ ಅನಾರೋಗ್ಯ ಕಾಡುತ್ತದೆ ಮತ್ತು ಆಗಾಗ ಅವರು ಹುಷಾರು ತಪ್ಪಿ ಸಾಯಬಹುದು ಎಂಬ ಕಾರಣಕ್ಕೆ ಅವರಿಗೆ ಮದುವೆ ಮಾಡಲಾಗುತ್ತದೆ.