
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು ₹4 ಕೋಟಿಗೂ ಅಧಿಕ ವಂಚನೆ ಮಾಡಿದ ಆರೋಪದಡಿ, ಇಬ್ಬರು ಪ್ರಮುಖ ಆರೋಪಿಗಳನ್ನು ಮಂಗಳೂರು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಕಮಿಷನರ್ ಸುಧೀರ್‌ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ದಿಲ್ ಶಾದ್ ಅಬ್ದುಲ್ ಸತ್ತಾರ್‌ಖಾನ್ (45) ಮತ್ತು ಕಿಶೋರ್‌ಕುಮಾರ್ (34) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ತನಿಖೆ ಆರಂಭವಾಗಿದೆ.
ಪ್ರಕರಣದ ವಿವರ: ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ ‘ಹೈರ್‌ಗೋ ಎಲಿಗೆಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ ಪ್ರೈ.ಲಿ.’ ಎಂಬ ಹೆಸರಿನಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು, ಸುಮಾರು 300 ಮಂದಿಯಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸ್ ತಂಡವು ಆರೋಪಿಗಳನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದ್ದು, ಇವರ ವಿರುದ್ಧ ಮಂಗಳೂರಿನ ಉತ್ತರ ಪೊಲೀಸ್ ಠಾಣೆ ಹಾಗೂ ಮುಂಬೈಯ ನವಿ ಮುಂಬೈ ಠಾಣೆಯಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಮೇಲೆ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ (ಕೆಕೋಕಾ) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಜಾಮೀನು ಪಡೆಯುವುದು ಕಠಿಣ ಎಂದು ಕಮಿಷನರ್ ಸುಧೀರ್‌ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕಮಿಷನರ್ ಎಚ್ಚರಿಕೆ: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಎರಡು ಅಪರಾಧ ಪ್ರಕರಣಗಳು ದಾಖಲಾದವರ ವಿರುದ್ಧ ಕೆಕೋಕಾ ಕಾಯ್ದೆಯಡಿ ಕೇಸು ದಾಖಲಿಸಿ, ಜಾಮೀನು ಸಿಗದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಸುಧೀರ್‌ಕುಮಾರ್ ರೆಡ್ಡಿ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.