
ಚಿಕ್ಕಬಳ್ಳಾಪುರ: ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವನ್ನಪ್ಪಿದ್ದು, ತಾಯಿ ಗಂಭೀರ ಗಾಯಗೊಂಡ ಘಟನೆ ಫೆಬ್ರವರಿ 23 ರಂದು ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿಯಲ್ಲಿ ನಡೆದಿದೆ.
ಮೃತ ಮಗುವನ್ನು ಪೃಥ್ವಿರಾಜ್ (3) ಎಂದು ಗುರುತಿಸಲಾಗಿದೆ. ಗರ್ಭಿಣಿ ತಾಯಿ ಮೋನಿಕಾ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
15 ದಿನಗಳ ಹಿಂದೆ ಹೆರಿಗೆಗಾಗಿ ತವರು ಮನೆ ಹಾಲಗಾನಹಳ್ಳಿಗೆ ಬಂದಿದ್ದ ಮೋನಿಕಾ ಮತ್ತು ಅವರ ಮಗು ಈ ಅವಘಡಕ್ಕೆ ಗುರಿಯಾಗಿದ್ದಾರೆ. ಮನೆಯ ಮುಂದಿದ್ದ ತೆಂಗಿನ ಮರ ಆಕಸ್ಮಿಕವಾಗಿ ಮುರಿದು ಬಿದ್ದ ಪರಿಣಾಮ ಮಗು ಮೃತಪಟ್ಟಿದೆ. ತಾಯಿ ಮೋನಿಕಾ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಪ್ರಕರಣವನ್ನು ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.