
ಹೊಸದಿಲ್ಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ತಹಾವ್ವುರ್ ಹುಸೇನ್ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಕಠಿಣ ವಿಚಾರಣೆ ಪ್ರಾರಂಭಿಸಿದ್ದಾರೆ. ಪಟಿಯಾಲಾ ಹೌಸ್ ಕೋರ್ಟ್ 18 ದಿನಗಳ ತನಿಖಾ ಕಷ್ಟಡಿ ನೀಡಿದ ಕೂಡಲೇ, ಎನ್‌ಐಎ ಅಧಿಕಾರಿಗಳು ರಾಣಾನನ್ನು ಬಿಗಿ ಭದ್ರತೆಯಲ್ಲಿ ತಮ್ಮ ಪ್ರಧಾನ ಕಚೇರಿಗೆ ಕರೆದೊಯ್ದಿದ್ದಾರೆ.
ಎನ್‌ಐಎ ಡಿಐಜಿ ಜಯಾ ರಾಯ್ ನೇತೃತ್ವದಲ್ಲಿ ವಿಚಾರಣೆ ಶುಕ್ರವಾರ ಬೆಳಗ್ಗೆಯಿಂದಲೇ ಆರಂಭವಾಗಿದೆ. ರಾಣಾ ಈಗ ಎನ್‌ಐಎ ಕೇಂದ್ರ ಕಚೇರಿಯಲ್ಲಿರುವ 14×14 ಅಡಿ ಕೋಣೆಯಲ್ಲಿ ಇರಿಸಲಾಗಿದ್ದು, ಇಲ್ಲಿ ಆಹಾರ, ನೀರು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ವಿಚಾರಣೆಯ ಉದ್ದೇಶ:
– ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜತೆಗಿನ ಸಂಬಂಧ
– ಡೇವಿಡ್ ಕೋಲ್‌ಮನ್ ಹೆಡ್ಲಿಯೊಂದಿಗೆ ನಂಟು
– ಪಾಕಿಸ್ತಾನ ಐಎಸ್‌ಐ ಜತೆಗಿನ ಸಂಪರ್ಕ
– ದಾಳಿಯ ಪೂರ್ವಸಂಚು, ಭಾರತದಲ್ಲಿನ ಪ್ರಯಾಣದ ವಿವರಗಳು
– ದಕ್ಷಿಣ ಮತ್ತು ಉತ್ತರ ಭಾರತದ ಭಾಗಗಳಲ್ಲಿ ದಾಳಿ ಸಂಚು ರೂಪಿಸಿದ್ದರೆ ಎಂಬುದು ಸೇರಿದಂತೆ ಹಲವು ಅಂಶಗಳ ಸ್ಪಷ್ಟತೆ
ರಾಣಾ ಹಸ್ತಾಂತರದ ಚಿತ್ರ ಪ್ರಕಟ:
ಅಮೆರಿಕದ ಮಾರ್ಷಲ್‌ಗಳು ರಾಣಾನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿರುವ ಕ್ಷಣದ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಫೋಟೋದಲ್ಲಿ ರಾಣಾ ಸೊಂಟ ಮತ್ತು ಕಾಲಿಗೆ ಕಬ್ಬಿಣದ ಬೇಡಿಗಳಲ್ಲಿ ಬಿಗಿದಿರುವ ದೃಶ್ಯ ಕಾಣಿಸುತ್ತಿದೆ. ರಾಣಾ ಅಮೆರಿಕದ ಜೈಲು ಸಮವಸ್ತ್ರದಲ್ಲಿ ಇದ್ದರು.
ಪಾಕ್ ವಾಯುಪ್ರದೇಶ ತಪ್ಪಿಸಿದ ವಿಮಾನ:
ಅಮೆರಿಕದಿಂದ ಭಾರತದತ್ತ ಬರುತ್ತಿದ್ದ ವಿಮಾನ, ಪಾಕಿಸ್ತಾನದ ವಾಯುಪ್ರದೇಶವನ್ನು ತಪ್ಪಿಸಿ ದೀರ್ಘ ಮಾರ್ಗದಿಂದ ದಿಲ್ಲಿಗೆ ಬಂದಿದೆ. ಇದು ಭದ್ರತಾ ಕಾರಣದಿಂದ ತೆಗೆದುಕೊಳ್ಳಲಾದ ಮುನ್ನೆಚ್ಚರಿಕೆಯ ಕ್ರಮ ಎನ್ನಲಾಗಿದೆ.
ವಿಮಾನ ಪತ್ತೆಯಾಗದಂತೆ ನಕಲಿ ಕೋಡ್ ಬಳಕೆ:
ಭದ್ರತಾ ದೃಷ್ಟಿಯಿಂದ, ರಾಣಾ ಸಾಗಣೆಗೆ ಬಳಸಿದ ಗಲ್ಫ್ ಸ್ಟ್ರೀಮ್ G550 ವಿಮಾನಕ್ಕೆ ನಕಲಿ ಕೋಡ್ ಬಳಸಲಾಗಿತ್ತು. ಇದು ಸಾರ್ವಜನಿಕ ವಿಮಾನ ಟ್ರ್ಯಾಕರ್‌ಗಳಲ್ಲಿ ಪತ್ತೆಯಾಗದಂತೆ ಮಾಡಲು ರೂಪಿಸಲಾದ ರಕ್ಷಣಾತ್ಮಕ ಕ್ರಮವಾಗಿತ್ತು.