
ಜಿಲ್ಲಾ ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ: ಮಾಧವ ಕೃಪಾ ಶಾಲೆಗೆ ಪ್ರಥಮ ಹಾಗೂ ಪರ್ಯಾಯ ಪ್ರಶಸ್ತಿ
ಉಡುಪಿ : ಭಾರತದ 78 ನೇ ಸ್ವಾತಂತ್ರೋತ್ಸವ ಸಂಭ್ರಮದ ಪ್ರಯುಕ್ತ ಉಡುಪಿಯ ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸಂಕೀರ್ತನ ಮಂದಿರದಲ್ಲಿ ಕಳೆದ ಬುಧವಾರ ಆಯೋಜನೆಗೊಂಡ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಆಗಸ್ಟ್ 15ರಂದು ನಡೆಯಿತು. ಜಿಲ್ಲೆಯ ಸರಿಸುಮಾರು 19 ಶಾಲೆಗಳಿಂದ 26ಕ್ಕೂ ಮೀರಿ ತಂಡಗಳ 150ಕ್ಕೂ ಮೀರಿ ವಿದ್ಯಾರ್ಥಿಗಳು ಆಗಸ್ಟ್ 13ರಂದು ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಉಡುಪಿಯ ಮಾಧವ ಕೃಪಾ ಶಾಲೆಗೆ ಎರಡು ಬಹುಮಾನಗಳು ಲಭಿಸಿದ ಫಲಶೃತಿಯಾಗಿ ಸ್ವರಸಾಮ್ರಾಟ್ ವಿದ್ವಾನ್ ಅಭಿರಾಮ್ ಭರತವಂಶಿ ಪರ್ಯಾಯ ಪಾರಿತೋಷಕವನ್ನೂ ಸಹ ಮಾಧವ ಕೃಪಾಗೆ ಪ್ರದಾನಮಾಡಲಾಗಿದೆ. ಅಷ್ಟೂ ಸ್ಪರ್ಧೆಗಳ ತೀರ್ಪುಗಾರರಾಗಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಗುರು-ವಿದುಷಿ, ಶ್ರೀಮತಿ ಮಾಧವಿ ಭಟ್ ಪೆರ್ಣಂಕಿಲ ಹಾಗೂ ಭಜನ್ ಗುರು-ವಿದುಷಿ . ಶ್ರೀಮತಿ ಲಲಿತಾ ಶ್ರೀರಾಮ್ ಭಟ್ ಸಮಕ್ಷಮದಲ್ಲಿ ತುಳುನಾಡಿನ ವಿಖ್ಯಾತ ಗಮಕ ವ್ಯಾಖ್ಯಾನಕಾರರೂ, ಕವಿ, ಕನ್ನಡ ಅಧ್ಯಾಪಕರಾದ ಡಾ. ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿದ್ಯಾರ್ಥಿ ದೆಸೆಯಲ್ಲಿ ದೇಶಭಕ್ತಿ ಬೆಳೆಸಿಕೊಂಡವರು ಎಂದೂ ದೇಶದ್ರೋಹಿ ಕಾರ್ಯವೆಸಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು. ಈ ನಿಟ್ಟಿನಲ್ಲಿ ಅಭಿರಾಮ ಧಾಮದ ಪರಿಶ್ರಮದ ಫಲವಾಗಿ ನೂರಾರು ಶಾಲಾ ಮಕ್ಕಳ ಹೃನ್ಮನಗಳಲ್ಲಿ ರಾಷ್ಟ್ರಪ್ರೇಮಾಂಕುರವಾಗಿದೆಯೆಂದರು.
ಶಾಲಾ ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವ ಸಲುವಾಗಿ, ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಲ್ಲಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಒಟ್ಟು ಆರು ಶಾಲೆಗಳ 54 ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ, ಉಪಯುಕ್ತ ಪುಸ್ತಕಗಳನ್ನೂ ನಗದು ಪುರಸ್ಕಾರಗಳನ್ನೂ ನೀಡಲಾಗಿದ್ದು ಶಾಲಾ ಮಕ್ಕಳಲ್ಲಿ ದೇಶಭಕ್ತಿಯ ನವ ಸಂಚಲನ ಉಂಟುಮಾಡಲಾಗಿದೆ.

ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ ಮುಕುಂದ ಕೃಪಾ ಶಾಲೆ ಭಾಜನವಾಗಿದ್ದು, ದ್ವಿತೀಯ ಬಹುಮಾನ ಅನಂತೇಶ್ವರ ಶಾಲೆಗೂ, ತೃತೀಯ ಬಹುಮಾನ ಮಾಧವ ಕೃಪಾ ಶಾಲೆಗೆ ಲಭಿಸಿದೆ ಎಂದು ಅಭಿರಾಮಧಾಮದ ಸಂಸ್ಥಾಪಕ ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಿಳಿಸಿದ್ದಾರೆ. ಇದರೊಂದಿಗೆ ಮೂರು ಸಮಾಧಾನಕರ ಬಹುಮಾನಗಳನ್ನೂ ಕೊಡಲಾಗಿದ್ದು ಈ ಶ್ರೇಣಿಯಲ್ಲಿ ಇಂದ್ರಾಳಿ ಶಾಲೆಗೆ ಪ್ರಥಮ, ಗುಂಡಿಬೈಲು ಆಂಗ್ಲ ಮಾಧ್ಯಮ ಶಾಲೆಗೆ ದ್ವಿತೀಯ ಹಾಗೂ ಅಲೆವೂರಿನ ಶಾಂತಿನಿಕೇತನ ಶಾಲೆಗೆ ತೃತೀಯ ಬಹುಮಾನಗಳನ್ನು ಕೊಡಲಾಗಿದೆ. ಇನ್ನು, ದೇಶಭಕ್ತಿಗೀತೆ ಗಾಯನದಲ್ಲೇ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಮಾಧವ ಕೃಪಾ ಶಾಲೆಗೂ, ದ್ವಿತೀಯ ಸ್ಥಾನ ಶಾಂತಿನಿಕೇತನ ಶಾಲೆಗೂ, ತೃತೀಯ ಸ್ಥಾನ ಗುಂಡಿಬೈಲು ಆಂಗ್ಲ ಮಾಧ್ಯಮ ಶಾಲೆಗೂ ಲಭಿಸಿವೆ. ಮುಂದಿನ ಒಂದು ವರ್ಷಕಾಲ ಈ ಪರ್ಯಾಯ ಪಾರಿತೋಷಕ ಮಾಧವ ಕೃಪಾ ಶಾಲೆಯ ಸುಪರ್ದಿಯಲ್ಲಿರುತ್ತದೆ , ಆನಂತರ ಅಭಿರಾಮ ಧಾಮಕ್ಕೆ ಮರಳಿಸಲಾಗುತ್ತದೆ ಹಾಗೂ 2026ರ ಸಾಲಿನ ವಿಜಯೀ ಶಾಲೆಗೆ ಅದನ್ನು ಪ್ರದಾನಿಸಲಾಗುತ್ತದೆಯೆಂದು ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ನಾಟ್ಯವಿದುಷಿ. ಸುಷ್ಮಾ ಸುದರ್ಶನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.